ಪತ್ರಕರ್ತರ ಬದುಕು ಅನಿಶ್ಚಿತತೆ, ಅಭದ್ರತೆಯ ಮುಳ್ಳಿನ ಹಾದಿ: ಸಾಹಿತಿ ಬನ್ನೂರು ಕೆ.ರಾಜು
ಮೈಸೂರು,ಜೂ.30: ವೈದ್ಯ ಹಾಗೂ ಪತ್ರಿಕಾ ದಿನಾಚರಣೆ ಒಂದೇ ದಿನ ನಡೆಯುತ್ತಿರುವುದು ಹರ್ಷದಾಯಕ. ವೈದ್ಯರು ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿದರೆ, ಪತ್ರಕರ್ತರು ಸಮಾಜ ಸ್ವಾಸ್ಥ್ಯವನ್ನು ಕಾಪಾಡುವರು ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮೈಸೂರು ಕನ್ನಡ ವೇದಿಕೆ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕೋದ್ಯಮ ಸೇವೆಗಾಗಿ ರಾಜಶೇಖರ ಕೋಟಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರ ಬದುಕು ಅನಿಶ್ಚಿತತೆ, ಅಭದ್ರತೆಯ ಮುಳ್ಳಿನ ಹಾದಿಯಾಗಿದೆ. ಹುಲಿ ಮೇಲಿನ ಸವಾರಿಯಂತೆ ಸದಾ ಭಯ, ಆತಂಕದ ಮಧ್ಯೆಯೇ ತಮ್ಮ ಜೀವದ ಹಂಗು ತೊರೆದು ವೃತ್ತಿ ಮಾಡಬೇಕಾದ ಸಂಧಿಗ್ಧತೆಯು ಎದುರಾಗಿದೆ. ಎಲ್ಲಾ ಏಳು ಬೀಳುಗಳೊಂದಿಗೆ ಸಮಾಜವನ್ನು ತಿದ್ದುವ ಮೂಲಕ ವೃತ್ತಿಧರ್ಮವನ್ನು ಯಶಸ್ವಿಯಾಗಿ ನಡೆಸುತ್ತಿರವುದು ಶ್ಲಾಘನೀಯವೆಂದರು.
ಆಂದೋಲನ ದಿನಪತ್ರಿಕೆ ಸಂಪಾದಕ ದಿ.ರಾಜಶೇಖರ ಕೋಟಿಯವರ ಪ್ರಶಸ್ತಿಯನ್ನು ಹಿರಿಯ ವರದಿಗಾರರಾದ ಸದಾಶಿವಪ್ಪ, ಬಿ.ಎಸ್.ಪ್ರಭುರಾಜನ್, ರಾಜ್ ಕುಮಾರ್ ಬಾಹುಸಾರ್, ಪ್ರಜಾನುಡಿ ಉಪಸಂಪಾದಕಿ ಮಾಚಮ್ಮ ಮಲ್ಲಿಗೆ, ಪತ್ರಿಕಾ ಛಾಯಾಗ್ರಾಹಕರಾದ ಎಂ.ಎ.ಶ್ರೀರಾಮ್, ಕೆ.ಹೆಚ್.ಚಂದ್ರು, ನೇತ್ರರಾಜು ಅವರಿಗೆ ನೀಡಿ ಸನ್ಮಾನಿಸಲಾಯಿತು.
ಆಂದೋಲನ ಪತ್ರಿಕೆ ಸಂಪಾದಕ ರವಿಕೋಟಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಬಸವಣ್ಣ, ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಗೌರವಾಧ್ಯಕ್ಷ ನಾ.ಲಾ.ಬೀದಿ ರವಿ, ಪ್ಯಾಲೇಸ್ ಬಾಬು, ಬೀಡಾ ಬಾಬು, ಭೋಗಾದಿ ಸಿದ್ದೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.