ಮೈಸೂರು: ತೋಟಗಾರಿಕೆ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2018-06-30 17:29 GMT

ಮೈಸೂರು,ಜೂ.30: ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಸಹಾಯಕ ಹುದ್ದೆಯಲ್ಲಿ ಬಡ್ತಿ ನೀಡಿ ಸಹಾಯಕ ತೋಟಗಾರಿಕೆ ಹುದ್ದೆಯನ್ನು ನೀಡುತ್ತಿರುವುದರಿಂದ ಬಿಎಸ್ಸಿ ತೋಟಗಾರಿಕೆಯ ಪದವೀಧರರಿಗೆ ಅನ್ಯಾಯವಾಗುತ್ತಿದೆ. ತೋಟಗಾರಿಕೆ ಹುದ್ದೆಯನ್ನು ಬಿಎಸ್ಸಿ ಮಾಡಿದವರಿಗೆ ಮಾತ್ರ ಮೀಸಲಿಡುವಂತೆ ಒತ್ತಾಯಿಸಿ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಮೈಸೂರು ಕೋಟೆ ಆಂಜನೇಯ ದೇವಸ್ಥಾನದಿಂದ ಶನಿವಾರ ಜಾಥಾ ಹೊರಟು ಗಾಂಧಿ ವೃತ್ತ, ಚಿಕ್ಕ ಗಡಿಯಾರ, ಡಿ.ದೇವರಾಜ ಅರಸ್ ರಸ್ತೆ ಯ ಮೂಲಕ ಬಲಕ್ಕೆ ತಿರುಗಿ ಹುಣಸೂರು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶಾಂತಿಯುತ ಮೆರವಣಿಗೆ ನಡೆಸಿದರು.

ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ಕೇವಲ ಎಸೆಸೆಲ್ಸಿ ಮುಗಿಸಿದವರೂ 10ತಿಂಗಳ ಅವಧಿಯ ತೋಟಗಾರಿಕಾ ತರಬೇತಿಯನ್ನು ಪಡೆದು ತೋಟಗಾರಿಕಾ ಸಹಾಯಕರಾಗಿ ಕೆಲಸಕ್ಕೆ ಸೇರಿರುತ್ತಾರೆ. ಅವರಿಗೆ ಆಧುನಿಕ ವೈಜ್ಞಾನಿಕ ಪದ್ಧತಿಯ ಕುರಿತ ಇತ್ತೀಚಿನ ಮಾಹಿತಿ ಇರುವುದಿಲ್ಲ. ಸರ್ಕಾರ ಇವರಿಗೆಲ್ಲಾ ಬಡ್ತಿ ನೀಡಿ  ಸಹಾಯಕ ತೋಟಗಾರಿಕಾ ಅಧಿಕಾರಿಗಳನ್ನಾಗಿ ನಿಯುಕ್ತಿಗೊಳಿಸುತ್ತಿರುವುದುರಿಂದ ಬಿಎಸ್ಸಿ ಮುಗಿಸಿದ ಪದವೀಧರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಅದಕ್ಕಾಗಿ ಬಿಎಸ್ಸಿ ಪದವೀಧರರಿಗೆ ಮಾತ್ರ ಸಹಾಯಕ ತೋಟಗಾರಿಕಾ ಹುದ್ದೆಯನ್ನು ಮೀಸಲಿಡುವಂತೆ ಒತ್ತಾಯಿಸಿದರು. ಅಷ್ಟೇ ಅಲ್ಲದೇ ಕೃಷಿಯನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿದರು.

ಪ್ರತಿಭಟನೆಯಲ್ಲಿ ಕೆ.ಎನ್.ಕಿರಣ, ಹರ್ಷವರ್ಧನ್, ಸರಿತಾ, ಸೌಮ್ಯ, ವೆಂಕಟೇಶ್, ಚೇತನ್, ಹರೀಶ್ ಸೇರಿದಂತೆ ನೂರಾರು ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News