×
Ad

ಮೈಸೂರು: ವಿಚಾರವಾದಿ ಕೆ.ಎಸ್ ಭಗವಾನ್ ಕೊಲೆ ಸಂಚು ಖಂಡಿಸಿ ದಸಂಸ ಪ್ರತಿಭಟನೆ

Update: 2018-06-30 23:05 IST

ಮೈಸೂರು,ಜೂ.30: ವಿಚಾರವಾದಿಗಳಾದ ಎಂ.ಎಂ.ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಘೋರ ಹತ್ಯೆಗಳನ್ನು ಖಂಡಿಸಿ ಮತ್ತು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ರ ಕೊಲೆ ಸಂಚನ್ನು ಖಂಡಿಸಿ, ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿ ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಸಾಹಿತ್ಯದ ಮೂಲಕ ಶೋಷಿತ ಸಮುದಾಯಗಳ ಮೇಲೆ ಶತಮಾನಗಳಿಂದ ನಡೆಯುತ್ತಿರುವ ದೇವರು ಮತ್ತು ಧರ್ಮದ ಶೋಷಣೆಯ ವಿರುದ್ಧ ಧ್ವನಿಯೆತ್ತಿ ಶೋಷಿತ ಸಮುದಾಯಗಳಿಗೆ ಸತ್ಯವನ್ನು ಹೇಳಿ ಜಾಗೃತಿಗೊಳಿಸುತ್ತಿದ್ದು, ಕೋಮು ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸತ್ಯ ಹೇಳುವ ಪ್ರಗತಿಪರ ಚಿಂತಕರನ್ನು ಗುರಿಯಾಗಿಟ್ಟುಕೊಂಡು ಕೊಲೆಗೆ ಸಂಚು ರೂಪಿಸುವುದೇ ಆದರೆ ದಲಿತ ಸಮಾಜವು ಅಹಿಂಸಾ ಮಾರ್ಗವನ್ನು ತೊರೆದು ಹಿಂಸೆಯ ಮಾರ್ಗವನ್ನು ಕೂಡ ಆಲೋಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಶೋಷಿತ ಸಮುದಾಯಗಳ ಮೇಲೆ ಕೋಮು ಶಕ್ತಿಗಳು ದಾಳಿ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಚುಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಹೆಚ್.ಬಿ.ದಿವಾಕರ್, ಕಾರ್ಯ ಬಸವಣ್ಣ, ದೊಡ್ಡಸಿದ್ದು ಹಾದನೂರು, ಸೋಮಣ್ಣ ಬನ್ನಹಳ್ಳಿ, ಪುಟ್ಟಲಕ್ಷ್ಮಮ್ಮ, ಚಾಮರಾಜು ಇಲವಾಲ, ಕೆ.ನಂಜಪ್ಪ, ಶಿವಕುಮಾರ್, ಬಸವರಾಜು, ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News