ಸ್ವಾಮೀಜಿಗಳು ರಾಜಕಾರಣದ ಬಗ್ಗೆ ಮಾತನಾಡಬಾರದು: ಕಾಗಿನೆಲೆ ಶ್ರೀಗೆ ಶಾಸಕ ವಿಶ್ವನಾಥ್ ತಿರುಗೇಟು

Update: 2018-06-30 17:42 GMT

ಮೈಸೂರು,ಜೂ.30: ಸ್ವಾಮೀಜಿಗಳು ತಮ್ಮ ಸಮುದಾಯದ ಪರ ಮತ್ತು ಜಾತ್ಯಾತೀವಾಗಿ ನಡೆದುಕೊಳ್ಳಬೇಕೆ ಹೊರತು ರಾಜಕಾರಣ ಅಥವಾ ರಾಜಕಾರಣಿಗಳ ಪರವಾಗಿ ಮಾತನಾಡಬಾರದು. ಇದು ಜನತಂತ್ರ ವ್ಯವಸ್ಥೆಗೆ ಮಾರಕ ಎಂದು ಕಾಗಿನೆಲೆ ಶ್ರೀನಿರಂಜನಾನಂದ ಪುರಿ ಶ್ರೀಗಳ ಹೇಳಿಕೆಗೆ ಶಾಸಕ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕುರುಬರಿಗೆ ಧರ್ಮಪೀಠ ಬೇಕು ಎಂದಾಗ ಹೋರಾಟದ ನಾಯಕತ್ವ ವಹಿಸಿಕೊಂಡವನು ನಾನು. ನಾನೂ ಕೂಡ ಸಿದ್ದರಾಮಯ್ಯನವರ ಅಣ್ಣ-ತಮ್ಮ ತಾನೇ. ನನಗೆ ಸಿದ್ದರಾಮಯ್ಯ ನಿಂದ ಅನ್ಯಾಯವಾದಾಗ ಈ ಶ್ರೀಗಳು ಧ್ವನಿ ಎತ್ತಲಿಲ್ಲ. ಸಿಎಂ ಆಗುವ ತನಕ ನನ್ನ ಬೆನ್ನಿಗೆ ಬಿದ್ದಿದ್ದ ಸಿದ್ದರಾಮಯ್ಯ ನಂತರ ಮಾಡಿದ್ದೇನು? ಆಗ ಈ ಮಠಾಧೀಶರು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು. ರಾಜ್ಯದ ಕೆಲವು ಮಠಾಧೀಶರು ಅಧಿಕಾರವಿದ್ದ ಕಡೆ ವಾಲುತ್ತಾರೆ. ತಮ್ಮ ಜೋಳಿಗೆ ತುಂಬಿಸಿಕೊಳ್ಳುವುದನ್ನೇ ನೋಡುತ್ತಾರೆ. ಮಠಾಧೀಶರು, ಧರ್ಮಾಧಿಕಾರಿಗಳು ರಾಜ್ಯದ ಜನರ ಕಷ್ಟ ಅನಿಷ್ಟಗಳ ಬಗ್ಗೆ ಮಾತನಾಡಲಿ, ಅಭ್ಯಂತರವಿಲ್ಲ. ರಾಜಕಾರಣದಲ್ಲಿ ಮೂಗು ತೂರಿಸಬಾರದು. ಆಯಾ ಜಾತಿ, ಜನಾಂಗದ ರಾಜಕಾರಣಿಗಳ ಪರ ನಿಲ್ಲಬಾರದು. ರಾಜಕಾರಣಿಗಳು, ಅಧಿಕಾರಿಗಳ ಪರ ವಕಾಲತ್ತು ವಹಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ. ಜೆಡಿಎಸ್ ಗ ಬೇಷರತ್ ಬೆಂಬಲ ನೀಡಿದ್ದು ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ನ ಒಂದು ಭಾಗ ಅಷ್ಟೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಪ್ರಪಂಚವೇ ಮುಳುಗಿ ಹೋಯಿತು ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಎಂತೆಂತಹ ಘಟಾನುಘಟಿ ಸಿಎಂಗಳು ಬಂದು ಹೋಗಿಲ್ಲ. ಯಾರೂ ಕೂಡ ಸಿದ್ದರಾಮಯ್ಯ ಥರ ನಾನು ನಾನು ಎಂದು ಹೇಳುತ್ತಿರಲಿಲ್ಲ. ಕಾಂಗ್ರೆಸ್ ಎಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ. ಅವರೇ ಸಮ್ಮಿಶ್ರ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ. ಈಗಲೂ ಸಿದ್ದರಾಮಯ್ಯ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಮಗೆ ಸಚಿವ ಸ್ಥಾನಮಾನ ತಪ್ಪಿಸಲು, ಜಿ.ಟಿ. ದೇವೇಗೌಡರ ಖಾತೆ ಬದಲಾಗದಿರಲು ಅವರ ಹಸ್ತಕ್ಷೇಪ ಇಲ್ಲ ಎಂದವರಾರು ಎಂದು ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News