×
Ad

ಸ್ವಯಂ ಕೃತಾಪರಾಧದಿಂದಾಗಿ ಎಚ್.ವಿಶ್ವನಾಥರ ರಾಜಕೀಯ ಹಾಳಾಗಿದೆ: ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

Update: 2018-06-30 23:46 IST

ದಾವಣಗೆರೆ,ಜೂ.30: ಸ್ವಯಂ ಕೃತಾಪರಾಧದಿಂದಾಗಿ ಎಚ್. ವಿಶ್ವನಾಥ ಅವರ ರಾಜಕೀಯ ಹಾಳಾಗಿದೆಯೇ ಹೊರತು, ಬೇರೆ ಯಾವ ಕಾರಣಕ್ಕೂ ಅಲ್ಲ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ  ಹೇಳಿದರು.

ಬೆಳ್ಳೂಡಿಯ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ಕೆರೆಯಲ್ಲಿ ಸ್ಥಾನ ಮಾಡಿ, ದಡಕ್ಕೆ ಬಂದ ನಂತರ ತನ್ನ ಮೈಮೇಲೆ ತಾನೇ ಮಣ್ಣು ಹಾಕಿಕೊಳ್ಳುತ್ತದೆ. ಆನೆ ತಲೆ ಮೇಲೆ ಯಾರೂ ಮಣ್ಣು ಹಾಕುವುದಿಲ್ಲ. ವಿಶ್ವನಾಥ ಸಹ ತಮ್ಮ ಮೇಲೆ ತಾವೇ ಮಣ್ಣು ಹಾಕಿಕೊಂಡಿದ್ದಾರೆಯೇ ಹೊರತು, ಬೇರಾರೂ ಮಣ್ಣು ಹಾಕಿಲ್ಲ. ಇದೇ ಕಾರಣಕ್ಕೆ ವಿಶ್ವನಾಥ್‍ರಿಗೆ ಇಂದು ಈ ಸ್ಥಿತಿ ಬಂದಿದೆ ಎಂದರು.

ಈ ಸಮಾಜವನ್ನು ಕಟ್ಟುವಲ್ಲಿ ಹಗಲಿರುಳು ದುಡಿದಂತಹವರಲ್ಲಿ ವಿಶ್ವನಾಥ್ ಸಹ ಒಬ್ಬರು. ನಿಮಗೆ ನಾವು ಹೇಳುವುದು ಅತಿರೇಕವಾಗುತ್ತದೆ. ಹತಾಶರಾಗಿ ವಿಶ್ವನಾಥ್ ಮಾತನಾಡುತ್ತಿರುವುದು ನಮಗೂ ಅರ್ಥವಾಗುತ್ತಿಲ್ಲ.  ನಾನು ಯಾರ ಪರವಾಗಿ ಕೆಲಸ ಮಾಡಿಲ್ಲ? ಬಿಜೆಪಿಯಲ್ಲಿ ಕೆ.ಎಸ್. ಈಶ್ವರಪ್ಪಗೆ ತೊಂದರೆಯಾದಾಗಲೂ ಮಾತನಾಡಿದ್ದೇನೆ. ನನ್ನ ಸಮಾಜದ ನಾಯಕರಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ನಾನು ಎಂದಿಗೂ ಸಮಾಜದ ಪರವಾಗಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, ರಾಜಕೀಯದಲ್ಲಿ ನಾನೆಂದಿಗೂ ಮೂಗು ತೂರಿಸುವುದಿಲ್ಲ. ವಿಶ್ವನಾಥ್‍ರ ಬಗ್ಗೆ ನಾವೆಲ್ಲೂ ಟೀಕೆ ಮಾಡಿಲ್ಲ. ವಿಶ್ವನಾಥರ ಕೆಲ ನಡವಳಿಕೆಗೆ ಸಿದ್ದರಾಮಯ್ಯಗೂ ಬೇಸರ ತಂದಿದೆ ಎಂದ ಅವರು, ಬೇರಾವುದೇ ಸಮಾಜದ ಮುಖಂಡರೂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಲಿಲ್ಲ. ಆದರೆ, ವಿಶ್ವನಾಥ್ ಮಾತ್ರ ನಿರಂತರ ಹೇಳಿಕೆ ನೀಡುತ್ತಲೇ ಇದ್ದರು ಎಂದು ಅವರು ವಿವರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News