×
Ad

ತುಮಕೂರು: ​ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಬಸ್ ಸಂಚಾರಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

Update: 2018-07-01 17:10 IST

ತುಮಕೂರು,ಜು.01: ನಗರದ ವಿವಿದ ಕಡೆಗಳಿಂದ ಬೆಂಗಳೂರು ನಗರಕ್ಕೆ ತಡೆ ರಹಿತ ಸಂಪರ್ಕ ಕಲ್ಪಿಸುವ ಬಸ್ ಸಂಚಾರಕ್ಕೆ ರವಿವಾರ ಬೆಳಗ್ಗೆ ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಗರದ ಬಸ್ ನಿಲ್ದಾಣಕ್ಕೆ ದೂರವಿರುವ ಬಡಾವಣೆಗಳಿಂದ ನಾಗರಿಕರಿಗೆ ನೇರ ಸಂಪರ್ಕ ಕಲ್ಪಿಸುವುದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರತಿದಿನ ಆಟೋ, ಸಿಟಿ ಬಸ್ ಹಿಡಿದು ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣ ಬೆಳೆಸುವುದು ತಪ್ಪುತ್ತದೆ. ಇದರಿಂದ ನಾಗರಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ಕೆಲ ಬಡಾವಣೆಗಳಿಗೆ ಸಿಟಿ ಬಸ್ ಬೇಡಿಕೆ ಬಂದಿದ್ದು, ಇದನ್ನು ಪರಿಶೀಲಿಸಿ ಬಸ್ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಅವರಿಗೆ ತಿಳಿಸಿದ್ದೇನೆ ಎಂದರು. 

ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಮಾತನಾಡಿ, ಮೂರು ವರ್ಷಗಳ ಹಿಂದೆ ಸೋಮೇಶ್ವರಪುರಂ ಮೂಲಕ ಬೆಂಗಳೂರು ನಗರಕ್ಕೆ ತಡೆರಹಿತ ಬಸ್ ಸಂಚಾರ ಆರಂಭಿಸಲಾಯಿತು. ಅದು ಇಂದಿಗೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಪ್ರೇರಿತರಾಗಿ ಇಂದು ನಗರದ ವಿವಿಧ ಬಡಾವಣೆಗಳಿಂದ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಈ ವಿಶೇಷ ಬಸ್‍ಗಳನ್ನು ಆರಂಭಿಸಲಾಗುತ್ತಿದೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಮತ್ತಷ್ಟು ಬಸ್‍ಗಳನ್ನು ಹಾಕಲಾಗುವುದು. ಇದರಿಂದ ಮುಖ್ಯ ಬಸ್ ನಿಲ್ದಾಣದ ಮೇಲಾಗುವ ಒತ್ತಡವನ್ನು ಕಡಿಮೆ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳಾದ ಪಕೃದ್ದೀನ್, ಲಕ್ಷ್ಮಿಪತಿ, ಶಿವರಾಮನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News