×
Ad

ಮುತಾಲಿಕ್ ಮುಖಕ್ಕೆ ಮಸಿ ಬಳಿದ ಯುವಕನಿಗೆ ಜಾಮೀನು ಕೊಡಿಸಿದ್ದೆ: ಸಚಿವ ಡಿ.ಕೆ.ಶಿವಕುಮಾರ್

Update: 2018-07-01 17:29 IST

ಬೆಂಗಳೂರು, ಜು.1: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಖಕ್ಕೆ ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಮಸಿ ಬಳಿದು ಬಂಧಿತನಾಗಿದ್ದ ವೇಳೆ ಜಾಮೀನು ಕೊಡಿಸಿದ್ದೆ ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವಿ.ಶ್ರೀನಿವಾಸ್ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಪ್ರೇಮಿಗಳ ದಿನ ವಿರೋಧಿಸಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಪ್ರತಿಭಟಿಸಿ ಅವರ ಮುಖಕ್ಕೆ ಮಸಿ ಬಳಿದಾಗ ಶ್ರೀನಿವಾಸ್ ಬಂಧಿತನಾಗಿದ್ದ. ಆ ವೇಳೆ ಶ್ರೀನಿವಾಸ್ ಬೆಂಬಲಕ್ಕೆ ಯಾವ ನಾಯಕರೂ ಮುಂದಾಗಲಿಲ್ಲ. ಆದರೆ, ನಾನು ಮುಂದೆ ಬಂದು ಜಾಮೀನು ಕೊಡಿಸಿ ಬಿಡಿಸಿದೆ ಎಂದು ಹಿಂದೆ ನಡೆದ ಘಟನೆಯನ್ನು ಮೆಲುಕು ಹಾಕಿದರು.

ಯಾರು ಹೆಚ್ಚು ಹೋರಾಟ ಮಾಡುತ್ತಾರೋ, ಯಾರು ಹೆಚ್ಚು ವಿವಾದಕ್ಕೆ ಗುರಿಯಾಗ್ತಾರೋ ಅವರೇ ಮುಂದೆ ನಾಯಕರಾಗಿ ಬೆಳೆಯೋದು ಎಂದ ಅವರು, ಸದಾ ಯುವಕರ ಹೋರಾಟವನ್ನು ಬೆಂಬಲಿಸುತ್ತೇನೆ. ಜೊತೆಗೆ, ಅವರಿಗೆ ಮಾರ್ಗದರ್ಶಕನಾಗಿಯೂ ಇರುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ನಾಯಕರಾಗ ಬೇಕಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅವನ್ನೆಲ್ಲಾ ಮೆಟ್ಟಿ ನಿಂತು ಮುಂದೆ ಸಾಗಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದ ಅವರು, ನಾಯಕನಾಗ ಬಯಸುವನು ಎದೆಗುಂದದೆ ಮುಂದೆ ಸಾಗಬೇಕು. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಹಿಂಜರಿಯಬಾರದು. ಮುನ್ನುಗ್ಗಿ ಶ್ರಮ ವಹಿಸಿದರೆ ಪ್ರತಿಫಲ ಸಿಗುತ್ತದೆ ಎಂದು ನುಡಿದರು.

ಕಾಂಗ್ರೆಸ್‌ನಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅವಕಾಶ ಸಿಕ್ಕಿರುವವರು ಎಂದೂ ಕಾಂಗ್ರೆಸ್‌ನ್ನು ಬಿಟ್ಟು ಬೇರೆಡೆ ಹೋಗಲು ಇಚ್ಛಿಸುವುದಿಲ್ಲ. ಪಕ್ಷದ ಬಗ್ಗೆ ತಿಳಿದವರು ಪಕ್ಷಕ್ಕಾಗಿ ನಿಷ್ಠಾವಂತವಾಗಿ ಶ್ರಮಿಸುತ್ತಾರೆ. ಈ ಸಮಾಜದಲ್ಲಿ ಸೇವೆ ಮಾಡುವವರನ್ನು ಮಾತ್ರ ಗುರುತಿಸುತ್ತದೆ. ಆದ್ದರಿಂದ, ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಂಡು ಕಾಂಗ್ರೆಸ್‌ಗೆ ಬನ್ನಿ ಎಂದು ಕರೆ ನೀಡಿದರು.

ರಾಹುಲ್ ಪ್ರಧಾನಿ: ರಾಷ್ಟ್ರೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾತನಾಡಿ, ನಾನು ನನ್ನ ಕೊನೆ ಉಸಿರುವವರೆಗೆ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವುದೇ ನನ್ನ ಗುರಿ ಎಂದು ಹೇಳಿದರು.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ಗೆ ನಾನು ಮಸಿ ಬಳಿದ ವೇಳೆ ನನ್ನನ್ನು ಕೆಪಿಸಿಸಿಯಿಂದ ಹೊರದೂಡಲು ಮೂರು ಬಾರಿ ಶಿಫಾರಸ್ಸು ಬಂದಿತ್ತು. ಆದರೆ, ಆಗ ನನ್ನ ಇದೇ ಪಕ್ಷದಲ್ಲಿ ಉಳಿಸಿದ್ದು, ಅಂದಿನ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಮಾತ್ರ ಎಂದು ನೆನಪು ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಜಿ.ಟಿ.ಚಂದ್ರಶೇಖರ್, ಜಯನಗರ ಶಾಸಕಿ ಸೌಮ್ಯಾರೆಡ್ಡಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪರಾಜು, ಎಐಸಿಸಿ ಕಾರ್ಯದರ್ಶಿ ರವಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News