ಸೋಮವಾರದಿಂದ ಮೈತ್ರಿ ಸರಕಾರದ ಬಜೆಟ್ ಅಧಿವೇಶನ
ಆಡಳಿತ-ವಿಪಕ್ಷಗಳ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು
ಬೆಂಗಳೂರು, ಜು. 1: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿಧಾನ ಮಂಡಲ ಚೊಚ್ಚಲ ಅಧಿವೇಶನ ನಾಳೆ(ಜು.2)ಯಿಂದ ಆರಂಭಗೊಳ್ಳಲಿದೆ. ಮೊದಲ ಅಧಿವೇಶನಕ್ಕೆ ಶಕ್ತಿಕೇಂದ್ರ ವಿಧಾನಸೌಧ ನವವಧುವಿನಂತೆ ಸಿಂಗಾರಗೊಂಡಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ವೇದಿಕೆ ಸಜ್ಜುಗೊಂಡಿದೆ.
ಸೋಮವಾರ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ವಿಧಾನ ಮಂಡಲ ಉಭಯ ಸದನಗಳ ಸದಸ್ಯರುಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದು, ರೈತರ ಸಾಲಮನ್ನಾ ಸೇರಿದಂತೆ ರಾಜ್ಯ ಸರಕಾರ ಮುಂಬರುವ ದಿನದಲ್ಲಿ ಕೈಗೊಳ್ಳಲಿರುವ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ.
ಜು.3 ಮತ್ತು 4 ರಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು, ಪ್ರಶ್ನೋತರ ಸೇರಿ ರಾಜ್ಯದಲ್ಲಿನ ಗಂಭೀರ ಸಮಸ್ಯೆಗಳು ಪ್ರಸ್ತಾಪ ಆಗುವ ನಿರೀಕ್ಷೆಯಿದೆ. ಈ ಮಧ್ಯೆ ಮೈತ್ರಿ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷಗಳ ಸದಸ್ಯರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ವಿಪಕ್ಷ ಬಿಜೆಪಿ ಸನ್ನದ್ಧವಾಗಿದೆ.
ಜು.5ಕ್ಕೆ ಬಜೆಟ್ ಮಂಡನೆ: ರೈತರ ಸಾಲಮನ್ನಾ, ಗರ್ಭಿಣಿಯರು ಮಾಸಾಶನ ಮತ್ತು ಹಿಂದಿನ ಸರಕಾರದ ಯೋಜನೆಗಳ ಮುಂದುವರಿಕೆ ಸೇರಿದಂತೆ ಸಂಪನ್ಮೂಲ ಕ್ರೋಢೀಕರಣ ನಿರೀಕ್ಷೆಯ ಮೈತ್ರಿ ಸರಕಾರದ ಮಹತ್ವದ, ಚೊಚ್ಚಲ ಬಜೆಟ್ ಜು.5ರ ಮಧ್ಯಾಹ್ನ 11:30ಕ್ಕೆ ಮಂಡನೆಯಾಗಲಿದೆ.
ಹಣಕಾಸು ಸಚಿವರೂ ಆಗಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಯವ್ಯಯ ಮಂಡನೆ ಮಾಡಲಿದ್ದು, ರಾಜ್ಯದ ರೈತರು, ಸಾರ್ವಜನಿಕರು ಸೇರಿದಂತೆ ಎಲ್ಲರ ಚಿತ್ತ ವಿಧಾನ ಮಂಡಲ ಅಧಿವೇಶನದತ್ತ ನೆಟ್ಟಿದೆ. ಮೈತ್ರಿ ಸರಕಾರದ ಮೊಟ್ಟ ಮೊದಲ ಬಜೆಟ್ ಮಂಡನೆಯ ಬಹುದೊಡ್ಡ ಸವಾಲನ್ನು ಎಚ್‌ಡಿಕೆ ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.
‘ಅಸ್ತ್ರ’ ಪ್ರಯೋಗಕ್ಕೆ ನಿಂತ ವಿಪಕ್ಷ: ರೈತರ ಸಾಲಮನ್ನಾ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿನ ಬಿಕ್ಕಟ್ಟು, ಐಎಎಸ್ ಅಧಿಕಾರಿಗಳ ವರ್ಗಾವಣೆ, ಮಳೆ-ನೆರೆ ಹಾನಿಗೆ ಪರಿಹಾರ ಕಲ್ಪಿಸುವಲ್ಲಿನ ಸರಕಾರ ವೈಫಲ್ಯ, ಮಠಾಧೀಪತಿಗಳ ಜುಗಲ್‌ಬಂಧಿ ಸೇರಿದಂತೆ ಸರಕಾರ ಆಡಳಿತ ವೈಫಲ್ಯಗಳ ‘ಅಸ್ತ್ರ' ಪ್ರಯೋಗಿಸಲು ವಿಪಕ್ಷ ಬಿಜೆಪಿ ಸಜ್ಜಾಗಿದೆ.
ನಿಷೇಧಾಜ್ಞೆ: ಜು.2ರಿಂದ 12ರ ವರೆಗೆ ವಿಧಾನ ಮಂಡಲ ಅಧಿವೇಶನ ಕಲಾಪದ ಹಿನ್ನೆಲೆಯಲ್ಲಿ ಜು.2ರ ಬೆಳಗ್ಗೆ 6ಗಂಟೆಯಿಂದ (ಜು.7-8 ಹೊರತುಪಡಿಸಿ) ಜು.12ರ ಮಧ್ಯರಾತ್ರಿ 12 ಗಂಟೆ ವರೆಗೆ ವಿಧಾನಸೌಧದ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
‘ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಭಾಷಣ ಮಾಡಲಿದ್ದು, ಆ ಬಳಿಕ ಕಾರ್ಯದರ್ಶಿ ವರದಿ ಮಂಡನೆ, ಜತೆಗೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚನೆ ಕಲಾಪ ನಡೆಯಲಿದೆ’
-ಎಸ್.ಮೂರ್ತಿ ವಿಧಾನಸಭೆ ಕಾರ್ಯದರ್ಶಿ
-ಜು.2ರಿಂದ 12ರ ವರೆಗೆ ಅಧಿವೇಶನ
-ಜು.2ಕ್ಕೆ ರಾಜ್ಯಪಾಲರ ಭಾಷಣ
-ಜು.5ಕ್ಕೆ ಬಜೆಟ್ ಮಂಡನೆ