ಸಂಸ್ಥೆಯ ಆದಾಯಕ್ಕೆ ಪೆಟ್ಟು ನೀಡುತ್ತಿರುವ ಖಾಸಗಿ ಬಸ್‍ಗಳ ಹಾವಳಿ ತಡೆಗೆ ಕ್ರಮ: ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ
ದಾವಣಗೆರೆ,ಜು.01: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದ ಹೊರ ಭಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ, ಸಂಸ್ಥೆಯ ಆದಾಯಕ್ಕೆ ಪೆಟ್ಟು ನೀಡುತ್ತಿರುವ ಖಾಸಗಿ ಬಸ್‍ಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.
ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಬಸ್ ನಿಲ್ದಾಣದೊಳಗೆ ಬಂದು ನಮ್ಮ ಬಸ್‍ಗಳಿಗೆ ಕಾಯುವ ಪ್ರಯಾಣಿಕರನ್ನು ಖಾಸಗಿ ಬಸ್ಸಿನವರು ಕರೆದೊಯ್ಯುವುದು, ನಮ್ಮ ಬಸ್ಸು ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲೇ ಖಾಸಗಿ ಬಸ್ಸು ನಿಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಖಾಸಗಿ ಬಸ್ಸುಗಳ ಹಾವಳಿ ತಡೆಯಲಿದ್ದೇವೆ ಎಂದು ಹೇಳಿದರು.
ಸರ್ಕಾರಿ ಬಸ್ಸುಗಳನ್ನು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ದಿಷ್ಟ ಹೊಟೆಲ್, ಡಾಬಾ ಮುಂದೆಯೇ ನಿಲ್ಲಿಸಬೇಕೆಂಬ ನಿರ್ದೇಶನವನ್ನೇನೂ ನೀಡಿಲ್ಲ. ನಮ್ಮ ಬಸ್ಸುಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಿದ್ದೇವೆ. ಹೈವೇ ಪ್ಲಾಜಾ ಹಾಗೂ ಬಸ್ಸು, ಟ್ರಕ್ ಟರ್ಮಿನಲ್ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸುವ ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆಯೂ ಮನವಿ ಮಾಡಲಿದ್ದೇವೆ. ಆದಷ್ಟು ಬೇಗನೆ ಈ ಬಗ್ಗೆ ತಮ್ಮ ಇಲಾಖೆಯಿಂದ ಕೇಂದ್ರಕ್ಕೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಬಸ್ಸು ನಿಲ್ದಾಣ ಆಧುನೀಕರಿಸುವ ಜೊತೆಗೆ ಸಂಸ್ಥೆಗೆ ಆರ್ಥಿಕ ಸಂಪನ್ಮೂಲವನ್ನೂ ಕ್ರೋಢೀಕರಿಸುವ ನಿಟ್ಟಿನಲ್ಲಿ ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಬಸ್ಸು ನಿಲ್ದಾಣಗಳ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಮೂಲಕ ಆದಾಯ ಮೂಲ ಹೆಚ್ಚಿಸಲಾಗುವುದು. ಅಲ್ಲದೆ, ಬಸ್ಸು ನಿಲ್ದಾಣಗಳ ಮೇಲೆ ಸೋಲಾರ್ ಫ್ಲಾಂಟ್ ಸ್ಥಾಪಿಸುವ ಮೂಲಕ ವಿದ್ಯುತ್ ಉತ್ಪಾದನೆಗೂ ಒತ್ತು ನೀಡುತ್ತಿದ್ದೇವೆ ಎಂದು ವಿವರಿಸಿದರು.
ದಾವಣಗೆರೆಯಲ್ಲಿ ನರ್ಮ್ ಯೋಜನೆ ಬಸ್‍ಗಳನ್ನು ರಾಣೆಬೆನ್ನೂರು-ದಾವಣಗೆರೆ ಮಧ್ಯ ಕಾರ್ಯಾಚರಿಸುತ್ತಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆ. ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಬಸ್ಸುಗಳಿಗಿಂತಲೂ ಖಾಸಗಿ ಸಿಟಿ ಬಸ್ಸುಗಳ ಹಾವಳಿಯೇ ಹೆಚ್ಚಾಗಿರುವ ಬಗ್ಗೆಯೂ ದೂರು ಕೇಳಿ ಬಂದಿದೆ. ಸದ್ಯಕ್ಕೆ 56 ಸರ್ಕಾರಿ ಸಿಟಿ ಬಸ್ ಸಂಚರಿಸುತ್ತಿದ್ದು, ಹಂತ ಹಂತವಾಗಿ ಅವುಗಳನ್ನು ಹೆಚ್ಚಿಸುವ ಬಗ್ಗೆಯೂ ಸಂಸ್ಥೆ ಒತ್ತು ನೀಡಲಿದೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ 9 ಎಕರೆ ವಿಸ್ತಾರದ ದಾವಣಗೆರೆ ಬಸ್ಸು ನಿಲ್ದಾಣ, ಡಿಪೋವನ್ನು ಸ್ಮಾರ್ಟ್ ಮಾಡುವತ್ತ ಇಲ್ಲಿನ ಪಾಲಿಕೆ ಗಮನ ಹರಿಸಬೇಕು. ಜೋರು ಮಳೆಯಾದರೆ ಇಲ್ಲಿನ ಬಸ್ಸು ನಿಲ್ದಾಣ ಸಂಪೂರ್ಣ ಜಲಾವೃತವಾಗುವುದಲ್ಲದೇ, ಪಕ್ಕದ ರಾಜ ಕಾಲುವೆಯೂ ಒತ್ತುವರಿಯಾದ ಬಗ್ಗೆ ದೂರುಗಳಿವೆ. ಈ ಬಗ್ಗೆ ಪಾಲಿಕೆಯವರು ಜಾಗದ ಸರ್ವೇ ಮಾಡಿಸಿ, ರಾಜಕಾಲುವೆ ಒತ್ತುವರಿ ತೆರವು ಮಾಡಿಸಲಿ ಎಂದು ಅವರು ಪಾಲಿಕೆಗೆ ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ 676 ಸಂಚಾರ ನಿಯಂತ್ರಣಾಧಿಕಾರಿಗಳ ಹುದ್ದೆಗಳು ಖಾಲಿ ಇದ್ದು, 260 ಆರ್‍ಟಿಓ ಅಧಿಕಾರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯ 2 ಪ್ರಕರಣಗಳ ಪೈಕಿ ಒಂದು ಸುಪ್ರೀಂ ಕೋರ್ಟ್‍ನಲ್ಲಿ, ಮತ್ತೊಂದು ಕೆಪಿಎಸ್‍ಸಿಯಲ್ಲಿ ವಿಚಾರಣೆಯ ಹಂತದಲ್ಲಿರುವ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ಕಾಯ್ದೆಗೆ ತಿದ್ದುಪಡಿ ತಂದು, ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಚಿಂತನೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಮೇಯರ್ ಶೋಭಾ ಪಲ್ಲಾಗಟ್ಟೆ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಖುರ್ಷಿದ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಕಾರ್ಯಾಧ್ಯಕ್ಷ ಗಣೇಶ ದಾಸಕರಿಯಪ್ಪ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಗುಡ್ಡಪ್ಪ, ಮುಖಂಡರಾದ ಅರಸೀಕೆರೆ ಎನ್.ಕೊಟ್ರೇಶ, ಆನಂದ ಇದ್ದರು.