ಮಹಾನಗರ ಪಾಲಿಕೆಯ ಕರಡು ಮೀಸಲಾತಿ ಅವೈಜ್ಞಾನಿಕ: ಕೆಪಿಸಿಸಿ ಕಾರ್ಯದರ್ಶಿ ಬಸವರಾಜ್ ಆರೋಪ

Update: 2018-07-01 13:52 GMT

ದಾವಣಗೆರೆ,ಜು.01: ಸರಕಾರ ಮಹಾನಗರ ಪಾಲಿಕೆಯ 45 ವಾರ್ಡ್‍ಗಳಿಗೆ ನಿಗದಿ ಮಾಡಿ, ಪ್ರಕಟಿಸಿರುವ ಕರಡು ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ 45 ವಾರ್ಡ್‍ಗಳಿಗೆ ನಿಗದಿ ಮಾಡಿರುವ ಮೀಸಲಾತಿ ಹಲವು ಲೋಪಗಳಿಂದ ಕೂಡಿದ್ದು, ಗೊಂದಲದ ಗೂಡಾಡಿ ಪರಿಣಮಿಸಿದೆ ಎಂದರು.

ಪಾಲಿಕೆ ವ್ಯಾಪ್ತಿಯ ವಾರ್ಡ್ 1ರಲ್ಲಿ ಬರುವ ಗಾಂಧಿನಗರದಲ್ಲಿ ಪರಿಶಿಷ್ಟ ಜಾತಿಯ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಆದರೆ, ಅಲ್ಲಿ ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲು ನಿಗದಿ ಮಾಡಲಾಗಿದೆ. ಅಲ್ಪಸಂಖ್ಯಾತರೇ ಹೆಚ್ಚು ನೆಲೆಸಿರುವ 3ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮಂಡಕ್ಕಿ ಭಟ್ಟಿ, ಬೀಡಿ ಲೇಔಟ್‍ನಲ್ಲಿ ಹಿಂದುಳಿದ ವರ್ಗ (ಬಿ) ಮಹಿಳೆಗೆ, ಹಿಂದುಳಿದ ವರ್ಗದ ಜನರೇ ಹೆಚ್ಚು ವಾಸ ಇರುವ 6ನೇ ವಾರ್ಡ್ ವ್ಯಾಪ್ತಿಯ ಕುರುಬರ ಬೀದಿ, ವಿಜಯ ನಗರದಲ್ಲಿ ಪರಿಶಿಷ್ಟ ಜಾತಿಗೆ, ಮುಸ್ಲಿಮರೇ ಹೆಚ್ಚು ವಾಸವಾಗಿರುವ 12ನೇ ವಾರ್ಡ್‍ನ ಅಹ್ಮದ್ ನಗರದಲ್ಲಿ ಸಾಮಾನ್ಯ ಮಹಿಳೆಗೆ, ಕೊರಚ-ಕೊರಮ, ಭೋವಿ ಸೇರಿದಂತೆ ಪರಿಶಿಷ್ಟ ಜಾತಿಯ ಜನರೇ ಹೆಚ್ಚುವಾಸವಾಗಿರುವ 13ನೇ ವಾರ್ಡ್‍ನ ಮುದ್ದಾಭೋವಿ ಕಾಲೋನಿಗೆ ಹಿಂದುಳಿದವರ್ಗ(ಎ)ಗೆ, ಸಾಮಾನ್ಯ ವರ್ಗದ ಜನರೇ ವಾಸಿಸುತ್ತಿರುವ 24ನೇ ವಾರ್ಡ್‍ನ ಎಂಸಿಸಿ ಎ ಬ್ಲಾಕ್, ಪಿಜೆ ಬಡಾವಣೆಗೆ ಹಿಂದುಳಿದ ವರ್ಗ(ಎ)ಗೆ, ಶೇ.80ಕ್ಕೂ ಹೆಚ್ಚು ಸಾಮಾನ್ಯ ವರ್ಗದ ಜನರೇ ನೆಲೆಸಿರುವ 34ನೇ ವಾರ್ಡ್‍ನ ಶಿವಕುಮಾರ್ ಸ್ವಾಮಿ ಬಡಾವಣೆಗೆ ಪರಿಶಿಷ್ಟ ಜಾತಿಗೆ ಮೀಸಲು ನಿಗದಿ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ಲಾವಲ್ಲಿ ಗಾಜಿಖಾನ್, ಟಿ.ವೈ.ಕುಮಾರ್, ಕೋಳಿ ಇಬ್ರಾಹಿಂ ಸಾಬ್, ಅಶ್ರಫ್ ಅಲಿ, ರಹಮತ್‍ವುಲ್ಲಾ, ಲಿಯಾಕತ್ ಅಲಿ, ಅಬ್ದುಲ್‍ಜಬ್ಬಾರ್, ಡಿ.ಶಿವಕುಮಾರ್, ರಮೇಶ್, ಥಾಮಸ್, ಸೈಯದ್ ನಜೀರ್, ಶೌಕತ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News