ಮೈಸೂರು: ರಾಷ್ಟ್ರೀಯ ವೈದ್ಯರ ದಿನಾಚರಣೆ; ಐವರು ವೈದ್ಯರಿಗೆ 'ವೈದ್ಯ ಭಾಸ್ಕರ' ಪ್ರಶಸ್ತಿ ಪ್ರದಾನ

Update: 2018-07-01 16:12 GMT

ಮೈಸೂರು,ಜು,1: ರೋಗಿಗಳ ಉತ್ತಮ ಸೇವೆಗಾಗಿ ನಗರದ ಐವರು ವೈದ್ಯರನ್ನು 'ವೈದ್ಯ ಭಾಸ್ಕರ' ಪ್ರಶಸ್ತಿ ಪ್ರದಾನದ ಮೂಲಕ ಗೌರವಿಸಲಾಯಿತು.

ಜೆಎಲ್‍ಬಿ ರಸ್ತೆಯಲ್ಲಿರುವ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ರವಿವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಹಾಗೂ ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರ 74ನೇ ಹುಟ್ಟುಹಬ್ಬದ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 74ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರನ್ನೂ ಅಭಿನಂದಿಸಲಾಯಿತು.

ಇದಕ್ಕೂ ಮುಂಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ಡಿ.ತಿಮ್ಮಯ್ಯ , ಡಾ.ಬಿ.ಸಿ.ರಾಯ್ (ಬಿಧನ್ ಚಂದ್ರ ರಾಯ್) ಅವರು ಈ ದೇಶ ಕಂಡ ಅತ್ಯುತ್ತಮ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿಯಾಗಿ 14 ವರ್ಷ ದಕ್ಷ ಆಡಳಿತ ನಡೆಸಿದ ವೈದ್ಯಕೀಯ ಕ್ಷೇತ್ರದ ಅಪರೂಪದ ಮಾದರಿ ವ್ಯಕ್ತಿ ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಘ(ಐಎಂಎ) ರಾಯ್ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಪ್ರತಿವರ್ಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಜೊತೆಗೆ ತಮ್ಮದೇ ರೀತಿಯಲ್ಲಿ ಸಮಾಜ ಸೇವೆಯನ್ನು ಸಲ್ಲಿಸುವ ವೈದ್ಯರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.

ಸಾಹಿತಿಗಳೂ ವೈದ್ಯರಿದ್ದಂತೆ. ಅವರು ಸಮಾಜದ ಕಾಯಿಲೆಗಳಾದ ಬಡತನ, ಜಾತಿಪದ್ಧತಿಯಂತಹ ಮಾರಕ ರೋಗಗಳನ್ನು ತಮ್ಮ ಸಾಹಿತ್ಯದ ಮೂಲಕ ಗುಣಪಡಿಸುತ್ತಾರೆ ಎಂದು ತಿಮ್ಮಯ್ಯ ಅಭಿಪ್ರಾಯಪಟ್ಟರು.

ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಪಿ.ವೆಂಕಟರಾಮಯ್ಯ, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಆರ್.ನಟರಾಜ ಜೋಯಿಸ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, 'ಧ್ವನಿ ಕೊಟ್ಟ ಧಣಿ' ಪ್ರಶಸ್ತಿ ಪುರಸ್ಕೃತ ಪಿ.ಶಾಂತರಾಜೇ ಅರಸ್, ಕೌಸ್ತುಭ ಕನ್ನಡ ಮಾಸಪತ್ರಿಕೆ ಸಂಪಾದಕರಾದ ರತ್ನ ಹಾಲಪ್ಪಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಆರ್.ಅರಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿಎಂ ಆಗಿದ್ದರೂ ರೋಗಿಯ ತಪಾಸಣೆ ಬಿಡಲಿಲ್ಲ
ಡಾ.ಬಿ.ಸಿ.ರಾಯ್ ಅವರು ಮುಖ್ಯಮಂತ್ರಿ ಆಗಿದ್ದರೂ ಪ್ರತಿದಿನ ಒಂದು ಗಂಟೆ ಬಡ ರೋಗಿಗಳನ್ನು ತಪಾಸಣೆ ಮಾಡುತ್ತಿದ್ದರು. ಅವರು ನಿಧನರಾಗುವ ಕೆಲ ಗಂಟೆಗಳ ಮುಂಚೆ ಕೂಡ ಈ ಕೆಲಸ ಬಿಡಲಿಲ್ಲ. ಅಲ್ಲದೆ, ತಮ್ಮ ಮನೆಯನ್ನು ಆಸ್ಪತ್ರೆಗೆ ದಾನ ಮಾಡಿದ ನಂತರ ಮೃತಪಟ್ಟರು. ಈಗಿನ ರಾಜಕಾರಣಿಗಳು ತಮ್ಮ ಜೀವನವನ್ನು ಸಂಕೀರ್ಣಗೊಳಿಸಿಕೊಂಡಿದ್ದಾರೆ. ರಾಯ್ ಅವರು ಹುಟ್ಟಿದ್ದು ಜು.1, 1882, ಮರಣ ಹೊಂದಿದ್ದು, ಜು.1, 1962. ಬಹುಶಃ ಗೌತಮ ಬುದ್ಧನಂತೆ ಹುಟ್ಟಿದ ದಿನಾಂಕದಂದೇ ಮೃತಪಟ್ಟ ಕೆಲವೇ ಮಂದಿ ಪೈಕಿ ರಾಯ್ ಕೂಡ ಒಬ್ಬರು.
-ಡಾ.ಪಿ.ವೆಂಕಟರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News