ರೇಸ್‍ಕೋರ್ಸ್ ಸ್ಥಳಾಂತರ ಖಚಿತ, ಯಾವುದೇ ಪ್ರಭಾವಕ್ಕೂ ಹೆದರುವುದಿಲ್ಲ: ಸಚಿವ ಸಾ.ರಾ.ಮಹೇಶ್

Update: 2018-07-01 16:20 GMT

ಮೈಸೂರು,ಜು.1: ರೇಸ್‍ಕೋರ್ಸ್ ಸ್ಥಳಾಂತರ ಖಚಿತ, ಯಾವುದೇ ಪ್ರಭಾವ ಮತ್ತು ಅಡ್ಡಿಗೂ ಹೆದರುವುದಿಲ್ಲವೆಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ರೇಸ್ ಕೋರ್ಸ್‍ಗೆ ರವಿವಾರ ಬೆಳಿಗ್ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಸ್‍ಕೋರ್ಸ್‍ನಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಮೂರು ತಿಂಗಳು ಗಡುವು ನೀಡಲಾಗಿದೆ. ಅದಕ್ಕೂ ಬಗ್ಗದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ರೇಸ್‍ಕೋರ್ಸ್‍ನಲ್ಲಿ ಸುಮಾರು 600 ಅನಧಿಕೃತ ಕಟ್ಟಡಗಳಿವೆ. ಸರ್ಕಾರದಿಂದ ಜಾಗ ನೀಡಿರೋದು ಕುದುರೆ ಓಡಿಸಲು ಮಾತ್ರ. ಕುದುರೆ ವಾಸಸ್ಥಾನಕ್ಕಲ್ಲ. ಇಲ್ಲಿನ ಜಾಗ ಸರ್ವೆ ನಂ. 4 ರ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ. ಯಾವ ಪ್ರಭಾವಿಗಳ ಒತ್ತಡಕ್ಕೂ ಜಗ್ಗಲ್ಲ ಎಂದರು. 600 ಕುದುರೆಗಳಿಗೆ ತಲಾ ಮೂವರು ಸಿಬ್ಬಂದಿಯಂತೆ 1800 ಸಿಬ್ಬಂದಿ ವಾಸ ಮಾಡುತ್ತಿದ್ದಾರೆ. ರೇಸ್‍ಕೋರ್ಸ್‍ನಲ್ಲಿ  110 ಕುದುರೆಗಳಿಗೆ ಮಾತ್ರ ಅವಕಾಶ ಇದೆ. ಹೆಚ್ಚುವರಿ ಕುದುರೆಗಳನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಎಂದರು.

ಕುದುರೆ ಮನೆಗಳನ್ನು ಪರಿಶೀಲಿಸಿ, ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಿಡಿಕಾರಿದ ಸಾ.ರಾ.ಮಹೇಶ್ ರವರು ಸ್ಥಳದಲ್ಲಿಯೇ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಿಮ್ಮನ್ನ ಎತ್ತಂಗಡಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಮಾಜಿ ಮೇಯರ್ ಗಳಾದ ರವಿಕುಮಾರ್, ಆರ್.ಲಿಂಗಪ್ಪ, ಸೇರಿದಂತೆ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸಚಿವರ ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News