ದಲಿತರು ಶೋಷಿತರ ಪರವಾಗಿ ಯಾವಾಗಲೂ ಇರುತ್ತೇನೆ: ಶಾಸಕ ರವೀಂದ್ರ ಶ್ರೀಕಂಠಯ್ಯ

Update: 2018-07-01 16:23 GMT

ಮಂಡ್ಯ, ಜು.1: ಕ್ಷೇತ್ರದಲ್ಲಿ ತಾನು ದಲಿತರು, ಶೋಷಿತರ ಪರವಾಗಿ ಯಾವಾಗಲೂ ಇರುತ್ತೇನೆ. ಅವರ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುತ್ತೇನೆ. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ರವೀಂದ್ರ ಶ್ರೀಕಂಠಯ್ಯ ಭರವಸೆ ನೀಡಿದ್ದಾರೆ.

ನಗರದ ಗಾಂಧಿಭವನದಲ್ಲಿ ರವಿವಾರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರೊಂದಿಗೆ ಸಂವಾದ ನಡೆಸಿ, ಪರಿಶಿಷ್ಟರ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಅವರು ಮಾಡಿದರು. ಪರಿಶಿಷ್ಟ ಜಾತಿ ಮತ್ತು ವರ್ಗದವರ ಅಭ್ಯುದಯಕ್ಕೆ ಮೀಸಲಾಗಿರುವ ಎಸ್.ಸಿ.ಪಿ. ಯೋಜನೆಗಳ ಕಾಮಗಾರಿ ದುರಪಯೋಗಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಈ ಯೋಜನೆಯಡಿ ಸರಕಾರದಿಂದ ಬಿಡುಗಡೆಯಾಗುವ ಹಣ ಎಲ್ಲಿ ಬರುತ್ತೆ, ಎಲ್ಲಿ ಹೋಗುತ್ತೆ ಎನ್ನುವುದೇ ತಿಳಿಯುತ್ತಿಲ್ಲ. ಇನ್ನು ಮುಂದೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಯೋಜನೆಯ ಸೌಲಭ್ಯ ಜನಸಾಮಾನ್ಯರಿಗೆ ದೊರಕಬೇಕು. ಅಲ್ಲದೆ, ಇದರಡಿ ನಿರ್ಮಾಣಗೊಳ್ಳುವ ರಸ್ತೆಗಳು ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು. ಕನಿಷ್ಟ 15 ವರ್ಷ ಬಾಳಿಕೆ ಬರುವಂತೆ ನಿರ್ಮಾಣವಾದಾಗ ಯೋಜನೆ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಅವರು ಹೇಳಿದರು. 

ಯುವಕರು ಸ್ವಉದ್ಯೋಗಿಗಳಾಗಿ ಸ್ವಾವಲಂಭಿ ಜೀವನ ನಡೆಸುವುದಕ್ಕೆ ಎಸ್.ಸಿ.ಪಿ ಯೋಜನೆಯಲ್ಲಿ ಅವಕಾಶಗಳಿವೆ. ಸ್ವಉದ್ಯೋಗಕ್ಕಾಗಿ ಯುವಕರಿಗೆ ಶೇ. 90ರಷ್ಟು ಸಬ್ಸಿಡಿ ನೀಡುವಂತಹ ಸೌಲಭ್ಯಗಳಿವೆ. ಅವುಗಳನ್ನು ಅರಿತು ಸ್ವಂತ ಉದ್ದಿಮೆ ಸೃಷ್ಠಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು. ಸಾಮಾನ್ಯ ಜನರಿಗೆ ಸಲ್ಲಬೇಕಾದ ಸವಲತ್ತುಗಳು ಅರ್ಹರಿಗೆ ತಲುಪಿಸಲಾಗುವುದು ಎಂದ ಅವರು, ದೇಶದ ಅಭಿವೃದ್ಧಿಗೆ ಶಿಕ್ಷಣ ಸಹ ಮಹತ್ತರ ಪಾತ್ರ ವಹಿಸುವುದರಿಂದ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ತಾಪಂ ಮಾಜಿ ಸದಸ್ಯ ಗುರುಸಿದ್ದಯ್ಯ ಮಾತನಾಡಿ, 1985ರಲ್ಲಿ ದಲಿತರ ಕ್ಷೇಮಾಭಿವೃದ್ಧಿ ಮತ್ತು ಚಿಂತನೆಗಳ ಕುರಿತು ದಿವಂಗತ ಎಸ್.ಡಿ. ಜಯರಾಂ ಅವರು ದಲಿತರೊಂದಿಗೆ ಸಂವಾದ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆವಿಗೂ ಯಾರೂ ಈ ಕಾರ್ಯವನ್ನು ಮಾಡಿರಲಿಲ್ಲ. ಇಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.  

ಸಂತೆಕಸಲಗೆರೆ ಸಿದ್ದಯ್ಯ, ಟಿ.ಡಿ. ಬಸವರಾಜು, ಪ್ರಭು, ಶಿವಕುಮಾರ್, ಟಿ.ಡಿ. ಎಸ್.ಡಿ.ಜಯರಾಂ, ಇತರೆ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News