ಪತ್ರಕರ್ತರು ವಸ್ತುನಿಷ್ಠತೆಯಿಂದ ಕೆಲಸ ನಿರ್ವಹಿಸಬೇಕು: ಶಾಸಕ ಎಂ.ಶ್ರೀನಿವಾಸ್

Update: 2018-07-01 16:29 GMT

ಮಂಡ್ಯ, ಜು.1: ಪತ್ರಕರ್ತರು ವಸ್ತುನಿಷ್ಠತೆಯಿಂದ ಕಾರ್ಯನಿರ್ವಹಿಸಬೇಕು. ಯಾವ ಮುಲಾಜಿಗೂ ಒಳಗಾಗಬಾರದು ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದ್ದಾರೆ.

ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ಸಹಕಾರ ಸಂಘದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ರವಿವಾರ ನಡೆದ ಕನ್ನಡ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮೈಸೂರು-ಬೆಂಗಳೂರು ಮಹಾನಗರಗಳ ನಡುವೆ ಇರುವ ಮಂಡ್ಯ ಕುಗ್ರಾಮವಾಗಿದೆ. ನನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಇದಕ್ಕೆ ಪತ್ರಕರ್ತರ ಮಾರ್ಗದರ್ಶನ ಸಹಕಾರ ಅಗತ್ಯ ಎಂದು ಅವರು ಮನವಿ ಮಾಡಿದರು.

ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ, ಪತ್ರಕರ್ತರು ಕೃಷಿ ಮತ್ತು ನೀರಿನ ಸದ್ಬಳಕೆ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವ ಜೊತೆಗೆ ಇತಿಹಾಸ ಹಾಗೂ ಸಂಸ್ಕೃತಿ ಪಸರಿಸುವ ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದರು. ಮೈಷುಗರ್ ಕಾರ್ಖಾನೆ ಕಾರ್ಯನಿರ್ವಹಿಸಿದರೆ ಮತ್ತು ಕಾವೇರಿ ಹರಿದರೆ ಮಾತ್ರ ಈ ಪ್ರದೇಶದ ರೈತರ ಬದುಕು ಹಸನಾಗಲು ಸಾಧ್ಯ. ರೈತರಿಗೆ ಹನಿ ನೀರಾವರಿ ಅವಶ್ಯಕತೆ ಮತ್ತು ಇಸ್ರೇಲ್ ಮಾದರಿ ಕೃಷಿ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.

ದೇಶ ಸುತ್ತಿ, ಕೋಶ ಓದು ಎಂಬಂತೆ ಪತ್ರಕರ್ತರು ವೈವಿಧ್ಯಮಯ ಪ್ರದೇಶಗಳಿಗೆ ಭೇಟಿ ನೀಡಿ ಇತಿಹಾಸ ಮತ್ತು ಚರಿತ್ರೆಯನ್ನು ಅರಿಯಬೇಕು. ರಾಗ ದ್ವೇಷಗಳಿಂದ ಕೂಡಿರುವ ನಗರವನ್ನು ಬಿಟ್ಟು ಹಳ್ಳಿ, ಗ್ರಾಮೀಣ ಪ್ರದೇಶಗಳು, ಧಾರ್ಮಿಕ ಸ್ಥಳಗಳಿಗೆ ತೆರಳಿ ಅಲ್ಲಿನ ಜನರ ಸಮಸ್ಯೆ, ಕಷ್ಟ-ಸುಖಗಳತ್ತ ಬೆಳಕು ಚೆಲ್ಲಬೇಕು ಎಂದವರು ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದ ಅವರಿಗೆ ಗುರುಗಳಾಗಿದ್ದ ಪೆರುಮಾಳ್‍ಗೆ ಸಂಗೀತ ಕಲಿಸಿಕೊಟ್ಟ ಭೈರವಿ ಕೆಂಪೇಗೌಡ  ನಮ್ಮ ಜಿಲ್ಲೆಯವರು. ಪೆರುಮಾಳ್ ಒಬ್ಬ ಪತ್ರಕರ್ತರಾಗಿದ್ದು, ಈ ಕುರಿತು ಹುರುಗಲವಾಡಿ ಲಕ್ಷ್ಮಿನರಸಿಂಹಶಾಸ್ತ್ರಿಯವರು ಬರೆದಿರುವ ಕಥೆಯಲ್ಲಿ ಉಲ್ಲೇಖವಿದೆ ಎಂದರು.

ಇದೇ ವೇಳೆ ವಾರ್ತಾ ಇಲಾಖೆ ಉಪನಿರ್ದೇಶಕ ಪಿ.ಎನ್.ಗುರುಮೂರ್ತಿ ಹಾಗೂ ಪತ್ರಕರ್ತ ಎಂ.ಎನ್. ಯೋಗೇಶ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಹಕಾರ ಮತ್ತು ಮುದ್ರಣಕಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಸಂಸ್ಥಾಪಕ ಅಧ್ಯಕ್ಷ ಕೌಡ್ಲೆ ಚನ್ನಪ್ಪ, ಎಂ.ಬಿ. ದಾಸಪ್ರಕಾಶ್, ಬಸವರಾಜ ಹೆಗಡೆ, ಡಿ.ದಶರಥಕುಮಾರ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News