ರಾಜ್ಯದಲ್ಲಿ ಅರಣ್ಯ ಪ್ರದೇಶ ಶೇ.12ರಷ್ಟು ಹೆಚ್ಚಿಸಲು ಕಾರ್ಯಕ್ರಮ: ಸಚಿವ ಆರ್.ಶಂಕರ್

Update: 2018-07-01 16:47 GMT

ಶಿವಮೊಗ್ಗ, ಜು.01: ಕಡಿಮೆಯಾಗುತ್ತಿರುವ ಹಸಿರು ಪರಿಸರವನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು
ಶೇ.12ರಷ್ಟು ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅರಣ್ಯ ಖಾತೆ ಸಚಿವ ಆರ್.ಶಂಕರ್ ಅವರು ತಿಳಿಸಿದರು.

ಅವರು ಭಾನುವಾರ ಸಕ್ರೆಬೈಲ್‍ನಲ್ಲಿ ಕೋಟಿ ಬೀಜದುಂಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೀಜದುಂಡೆ ಅಭಿಯಾನ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಇದನ್ನು ಬಯಲು ಸೀಮೆ ಪ್ರದೇಶದಲ್ಲಿ ಅನುಷ್ಟಾನಗೊಳಿಸುವ ಅಗತ್ಯವಿದೆ. ಇದಕ್ಕಾಗಿ ಸರ್ಕಾರದಿಂದ ಎಲ್ಲಾ ಸಹಾಯ ಸಹಕಾರ ನೀಡಲಾಗುವುದು. ಸಂಘ ಸಂಸ್ಥೆಗಳು, ಶಾಲೆ ಕಾಲೇಜು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಕೈ ಜೋಡಿಸುವ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ಜನರು ತಮ್ಮ ಜಮೀನಿನಲ್ಲಿ ಗಿಡ ನೆಡುವುದನ್ನು ಪ್ರೋತ್ಸಾಹಿಸಲು ಸರ್ಕಾರ ನೆರವು ನೀಡಲಿದೆ. ಒಂದು ಎಕ್ರೆ ಜಮೀನಲ್ಲಿ ಗಿಡ ನೆಡಲು 500 ಸಸಿಗಳನ್ನು ಒದಗಿಸಲಾಗುವುದು. ಹಾಗೂ ಮೂರು ವರ್ಷಗಳ ಅವಧಿಯಲ್ಲಿ ಪ್ರತಿ ಗಿಡಕ್ಕೆ ನೂರು ರೂ. ಪ್ರೋತ್ಸಾಹ ಧನ ಒದಗಿಸಲಾಗುವುದು. ಅರಣ್ಯೀಕರಣ ಯೋಜನೆಗಳ ಜಾರಿಗಾಗಿ ಬಜೆಟ್‍ನಲ್ಲಿ ಹೆಚ್ಚುವರಿಯಾಗಿ 560 ಕೋಟಿ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 10 ಕೋಟಿ ಸಸಿಗಳನ್ನು ನೆಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ವನ್ಯಜೀವಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಸಮಗ್ರ ಯೋಜನೆ ರೂಪಿಸಲಾಗಿದ್ದು, ಈ ಕುರಿತಾದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅರಣ್ಯೀಕರಣದ ಜತೆಯಲ್ಲಿ ಪರಿಸರ ಮಾಲಿನ್ಯವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಪ್ಲಾಸ್ಟಿಕ್‍ಗಳ ಬಳಕೆ ಸಂಪೂರ್ಣ ನಿಷೇಧ, ಮಾಲಿನ್ಯ ಉಂಟು ಮಾಡುವ ಕಾರ್ಖಾನೆಗಳಿಗೆ ಕಡಿವಾಣ ಜಾರಿಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಸಾಧಕ-ಬಾಧಕ ಪರಿಶೀಲನೆ: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಸಾಧಕ ಬಾಧಕಗಳ ಪರಿಶೀಲನೆ ನಡೆಸುವ ಅಗತ್ಯವಿದೆ. ಕುಡಿಯುವ ನೀರು ಪೂರೈಕೆ ಅನಿವಾರ್ಯತೆ ಹಾಗೂ ಅರಣ್ಯ ಸಂರಕ್ಷಣೆ ಸೇರಿದಂತೆ ಎಲ್ಲಾ ಆಯಾಮಗಳ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು. ಉತ್ತಿಷ್ಟ ಭಾರತ ಶಿವಮೊಗ್ಗ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News