ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿ ಪಡಿಸುವ ಬಗ್ಗೆ ಚಿಂತನೆ: ಸಚಿವ ತಮ್ಮಣ್ಣ

Update: 2018-07-01 17:31 GMT

ಚಿಕ್ಕಮಗಳೂರು,ಜು.01: ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣಗಳನ್ನು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿ ಪಡಿಸುವ ಚಿಂತನೆ  ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. 

ನಗರದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣಕ್ಕೆ ಭಾನುವಾರ ಭೇಟಿನೀಡಿ ಬಸ್‍ನಿಲ್ದಾಣದ ಶೌಚಾಲಯ ಶುಚಿತ್ವ, ಬಸ್‍ಗಳ ಸ್ಥಿತಿಗತಿ, ಪ್ಲಾಟ್ ಫಾರಂ, ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂಗೆ ಮಾತನಾಡಿದರು. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಕೆಳವರ್ಗದ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಾರೆ. ಕಡಿಮೆ ದರದಲ್ಲಿ ಮೂಲಭೂತ ಸೌಲಭ್ಯಗಳನ್ನು ಹಾಗೂ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಇಚ್ಚೆಯೂ ಇದೇ ಆಗಿದೆ. ಆದ್ದರಿಂದ ರಾಜ್ಯದ ಪ್ರತಿಯೊಂದು ಬಸ್‍ನಿಲ್ದಾಣಕ್ಕೂ ಖದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಬಸ್ ನಿಲ್ದಾಣಗಳಲ್ಲಿರುವ ಸಮಸ್ಯೆಗಳನ್ನು ಬೆಂಗಳೂರಿನಲ್ಲಿ ಕುಳಿತು ತಿಳಿದುಕೊಳ್ಳಲು ಸಾಧ್ಯವಿಲ್ಲ.  ಆದ್ದರಿಂದ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಿಗೂ ಮತ್ತು ಡೀಪೋಗಳಿಗೆ ಭೇಟಿನೀಡಿ ಸಮಸ್ಯೆಗಳನ್ನು ಅರಿತು ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣಗಳನ್ನು ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಚಿಂತನೆ ನಡೆಸಲಾಗುತ್ತಿದೆ ಎಂದರು.

ಬಸ್‍ನಿಲ್ದಾಣಗಳಲಿ ಮೂಲಭೂತ ಸೌಲಭ್ಯಗಳು, ಶೌಚಾಲಯ ಶುಚಿತ್ವವಾಗಿದೆಯೇ, ಬಸ್‍ಗಳ ಸ್ಥಿತಿಗತಿ, ಸಮಯಕ್ಕೆ ಸರಿಯಾಗಿ ಬಸ್‍ಗಳು ಹೊರಡುತ್ತವೆಯೇ ಇಂತಹ ಸಮಸ್ಯೆಗಳನ್ನು ಅರಿತು ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. 
ಪ್ರಸ್ತುತ ಸಾರಿಗೆ ಸಂಸ್ಥೆ ನಷ್ಠದಲ್ಲಿದೆ. ಸಂಸ್ಥೆಯ ಆದಾಯ ಹೆಚ್ಚಿಸಲು ಏನು ಕ್ರಮಕೈಗೊಳ್ಳಬೇಕು ಎಂಬ ಚಿಂತನೆ ನಡೆಯುತ್ತಿದೆ. ಬಸ್‍ನಿಲ್ದಾಣಗಳಲ್ಲಿ ಉತ್ತಮ ಗುಣಮಟ್ಟದ ವಾಣಿಜ್ಯ ಮಳಿಗೆ ತೆರೆದು ಅದರಿಂದ ಬರುವ ಆದಾಯದಿಂದ ಸಂಸ್ಥೆ ಅಭಿವೃದ್ದಿ ಪಡಿಸುವ ಚಿಂತನೆಯೂ ಇದೆ ಎಂದರು. 

ರಾಜಹಂಸದಂತಹ ಲೆಗ್ಸುರಿ ಬಸ್‍ಗಳು ಕೆಲವೊಮ್ಮೆ ಪ್ರಯಾಣಿಕರಿಗೆ ತೊಂದರೆ ನೀಡುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ. ಇದರ ಸುಧಾರಣೆಗೆ ಬೆಂಗಳೂರಿನಲ್ಲಿ ಕಾಲ್ ಸಂಟರ್ ತೆರೆಯಲಾಗುವುದು. ಯಾವುದೇ ಬಸ್ ಕೆಟ್ಟು ನಿಂತರೆ, ಅಥವಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರೆ ದೂರು ದಾಖಲಿಸಬಹುದು. ದೂರನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ಯೋಜನೆ ಸದ್ಯದಲ್ಲಿಯೇ ಜಾರಿಗೆ ತರಲಾಗುವುದು ಎಂದರು.

ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮ ಕೇಂದ್ರ ಹಾಗೂ ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿರುವುದರಿಂದ ಬಸ್‍ನಿಲ್ದಾಣ ಅತ್ಯಂತ ಚಿಕ್ಕದಾಗಿದೆ. ಈಗಿರುವ ಬಸ್‍ನಿಲ್ದಾಣವನ್ನು ಸಿ.ಟಿ.ಬಸ್‍ನಿಲ್ದಾಣವಾಗಿ ಮಾರ್ಪಡಿಸಿ, ಗ್ರಾಮಾಂತರ ಸಾರಿಗೆ ಮತ್ತು ಡೋಪೋವನ್ನು ಹೊರವಲಯದಲ್ಲಿ ತೆರೆಯುವ ಚಿಂತನೆ ಇದೆ ಎಂದರು.

ನಗರದ ಹಳೆ ಜೈಲು ಜಾಗದಲ್ಲಿ ಬಸ್‍ನಿಲ್ದಾಣ ಮಾಡುವ ಪ್ರಸ್ತಾವನೆ ಇದೆ.  ಗ್ರಾಮೀಣ ಸಾರಿಗೆ ಮತ್ತು ಡಿಪೋ ಒಂದೇ ಜಾಗದಲ್ಲಿ ಮಾಡುವುದರಿಂದ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ವರ್ಕ್‍ಶಾಪ್ ಮಾಡಬೇಕು ಬಸ್‍ಬಂದು ನಿಲ್ಲಲು ಹೆಚ್ಚಿನ ಸ್ಥಳಾವಕಾಶ ಬೇಕು. ಇದಕ್ಕೆಲ್ಲ ಸುಮಾರು 10 ಎಕರೆ ಪ್ರದೇಶ ಬೇಕಾಗುವುದರಿಂದ ಸೂಕ್ತ ಜಾಗದ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತಗೆದುಕೊಳ್ಳಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News