ದಲಿತ ರಾಷ್ಟ್ರಪತಿಯನ್ನು ಮುಂದಿಟ್ಟು ದಲಿತರ ಮೇಲೆ ದೌರ್ಜನ್ಯ?

Update: 2018-07-02 04:57 GMT

ಹಿಂದುತ್ವದ ಭ್ರಮೆಯ ಮೂಲಕ ಜಾತೀಯತೆಯನ್ನು ಮುಚ್ಚಿಡಲು ಸಂಘಪರಿವಾರ ಪ್ರಯತ್ನಿಸಿದಷ್ಟೂ, ಆ ಗಾಯ ಮತ್ತೆ ಮತ್ತೆ ತೆರೆಯುತ್ತಲೇ ಇದೆ. ಹಣ, ಅಂತಸ್ತು, ಅಧಿಕಾರ ಕೂಡ ಒಬ್ಬ ಕೆಳಜಾತಿಯ ವ್ಯಕ್ತಿಯ ಬದುಕನ್ನು ವಿಶೇಷವಾಗಿ ಮಾರ್ಪಡಿಸದು ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ದೇವಸ್ಥಾನ ಪ್ರವೇಶಿಸಿದ್ದಕ್ಕೆ, ದನದ ಚರ್ಮ ಸುಲಿದುದಕ್ಕೆ, ಮದುವೆಯ ದಿನ ಕುದುರೆಯ ಮೇಲೆ ಕೂತದಕ್ಕೆ, ಮೋಟರ್ ಸೈಕಲ್‌ನಲ್ಲಿ ಸವಾರಿ ಮಾಡಿದ್ದಕ್ಕೆ ಹಲ್ಲೆ, ಹತ್ಯೆಗಳು ನಡೆಯುತ್ತಲೇ ಇವೆೆ. ಸಾಮೂಹಿಕವಾಗಿ ಇದರ ವಿರುದ್ಧ ದಲಿತರು ಸಂಘಟಿತರಾದರೆ ಅವರನ್ನು ನಕ್ಸಲೀಯರು ಎಂದೂ ಕರೆಯಲೂ ಸರಕಾರ ಹಿಂಜರಿಯುವುದಿಲ್ಲ ಎನ್ನುವುದು ಸಾಬೀತಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ನ್ಯಾಯಾಲಯ ದುರ್ಬಲ ಗೊಳಿಸಲು ಯತ್ನಿಸಿದಾಗ ದಲಿತರು ಒಂದಾಗಿ ಅದರ ವಿರುದ್ಧ ಬೀದಿಗೆ ಇಳಿದರು. ಆಗ ಅದನ್ನು ಸರಕಾರ ಹೇಗೆ ದಮನಿಸಿತು ಎನ್ನುವುದನ್ನು ನಾವು ನೋಡಿದ್ದೇವೆ. ಇವೆಲ್ಲದರ ನಡುವೆಯೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪದೇ ಪದೇ ‘‘ನಾವು ದಲಿತನೊಬ್ಬನನ್ನು ರಾಷ್ಟ್ರಪತಿ ಮಾಡಿದ್ದೇವೆ’’ ಎಂದು ಹೇಳುತ್ತಿದೆ. ಒಬ್ಬ ದಲಿತ ಈ ದೇಶದ ರಾಷ್ಟ್ರಪತಿಯಾಗುವುದು ನಿಜಕ್ಕೂ ದೇಶಕ್ಕೆ ಗೌರವದ ವಿಷಯ. ಆದರೆ ಕೆಲವೊಮ್ಮೆ ದಲಿತರನ್ನು ಮುಂದಿಟ್ಟುಕೊಂಡೇ ದಲಿತರ ವಿರುದ್ಧ ವ್ಯವಸ್ಥೆ ಸಮರ ಸಾರಬಹುದು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದಲಿತ ಸಮುದಾಯದಿಂದ ಬಂದ ಕಾರಣಕ್ಕಾಗಿ ಈ ದೇಶದ ರಾಷ್ಟ್ರಪತಿಯಾಗಿದ್ದಾರೆ ಎನ್ನುವುದಕ್ಕಿಂತ, ಅವರು ಆರೆಸ್ಸೆಸ್‌ನ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಇಂದು ರಾಷ್ಟ್ರಪತಿಯಾಗಿದ್ದಾರೆ. ಕೋವಿಂದ್ ಅವರು ಅಂಬೇಡ್ಕರ್ ಸಿದ್ಧಾಂತವನ್ನು ನಂಬಿದವರಲ್ಲ. ಅಂಬೇಡ್ಕರ್ ವಿಚಾರಧಾರೆ ಮತ್ತು ಆರೆಸ್ಸೆಸ್ ವಿಚಾರಧಾರೆಗಳನ್ನು ಒಬ್ಬ ದಲಿತ ನಾಯಕ ಏಕಕಾಲದಲ್ಲಿ ತನ್ನದಾಗಿಸಲು ಸಾಧ್ಯವಿಲ್ಲ. ಇಷ್ಟಕ್ಕೂ ಆರೆಸ್ಸೆಸ್ ಸಿದ್ಧಾಂತ ದಲಿತರ ಕುರಿತಂತೆ ಯಾವ ನಿಲುವನ್ನು ಹೊಂದಿದೆ ಎನ್ನುವುದು ಗೊತ್ತಿರುವುದೇ ಆಗಿದೆ. ಹೀಗಿದ್ದರೂ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಕೋವಿಂದ್ ಯಾಕೆ ಬೇಕಾಗಿದ್ದಾರೆಂದರೆ, ಈ ದೇಶದ ಉಳಿದ ದಲಿತರು ಆರೆಸ್ಸೆಸ್ ಚಿಂತನೆಗಳ ವಿರುದ್ಧ ಸಂಘಟಿತರಾಗುವುದರಿಂದ ತಡೆಯುವುದಕ್ಕೆ. ಆರೆಸ್ಸೆಸ್‌ನ ಅಜೆಂಡಾಗಳನ್ನು ಒಬ್ಬ ಮೇಲ್ಜಾತಿಯ ನಾಯಕ ಜಾರಿಗೊಳಿಸುವುದು ಅತ್ಯಂತ ಅಪಾಯಕಾರಿ ಎನ್ನುವುದು ಗೊತ್ತಿರುವ ಕಾರಣಕ್ಕೆ ಅಂತಹ ಸಿದ್ಧಾಂತಗಳನ್ನು ದಲಿತ ನಾಯಕನೊಬ್ಬನ ಕೈಯಲ್ಲೇ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಆ ಕಾರಣಕ್ಕಾಗಿಯೇ ಕೋವಿಂದ್ ಇಂದು ರಾಷ್ಟ್ರಪತಿ ಸ್ಥಾನದಲ್ಲಿದ್ದಾರೆ. ಒಬ್ಬ ದಲಿತ ನಾಯಕ ರಾಷ್ಟ್ರಪತಿಯಂತಹ ಉನ್ನತ ಸ್ಥಾನಕ್ಕೇರುವ ಮೂಲಕ ಈ ದೇಶದ ದಲಿತರ ಪ್ರತಿಷ್ಠೆ ಹೆಚ್ಚಾಯಿತು ಎಂದು ಭಾವಿಸಿದರೆ ನಿರಾಸೆಯಾಗುತ್ತದೆ. ಬದಲಿಗೆ ಅವರು ರಾಷ್ಟ್ರಪತಿಯಾದ ಬಳಿಕ ಈ ದೇಶದಲ್ಲಿ ದಲಿತರ ಮೇಲೆ ಸಾಮೂಹಿಕ ದಾಳಿಗಳು ಹೆಚ್ಚಾಗುತ್ತಿವೆ. ಹಿಂದೆಲ್ಲ ದಾಳಿ ಪ್ರಕರಣಗಳು ವೈಯಕ್ತಿಕವಾಗಿದ್ದವು. ಸಂಘಟಿತ ದಲಿತರ ಮೇಲೆ ದಾಳಿ ನಡೆದಿರುವುದು ತೀರಾ ಕಡಿಮೆ. ಸಂಘಟಿತ ದಲಿತರಿಗೆ ವ್ಯವಸ್ಥೆಯೂ ಹೆದರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಘಟಿತ ದಲಿತರ ಮೇಲೆ ಕಾನೂನು ವ್ಯವಸ್ಥೆಯ ಸಹಕಾರದೊಂದಿಗೇ ಮೇಲ್ಜಾತಿಯ ಜನರು ದಾಳಿ ನಡೆಸುತ್ತಿದ್ದಾರೆ. ನ್ಯಾಯಾಲಯದ ತೀರ್ಪಿನ ವಿರುದ್ಧದ ಪ್ರತಿಭಟನೆ, ಕೋರೆಗಾಂವ್ ಘಟನೆಗಳ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ವ್ಯವಸ್ಥಿತವಾಗಿ ದಲಿತರ ಮೇಲೆ ಎರಗಿದ್ದರು. ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತಂತೆ ಪ್ರಸ್ತಾಪಿಸಿದಾಗಲೆಲ್ಲ ಬಿಜೆಪಿ, ರಾಷ್ಟ್ರಪತಿ ಕೋವಿಂದ್‌ರನ್ನು ತೋರಿಸಿ ತನ್ನ ದಲಿತ ಪ್ರೇಮವನ್ನು ಸಮರ್ಥಿಸಿಕೊಳ್ಳುತ್ತದೆ. ಅಂದರೆ ದಲಿತ ರಾಷ್ಟ್ರಪತಿಯನ್ನು ಮುಂದಿಟ್ಟುಕೊಂಡೇ ಅದು ದಲಿತ ಹೋರಾಟಗಳನ್ನು ದಮನಿಸುವ ಯೋಜನೆಯನ್ನು ರೂಪಿಸಿದೆ.
    
ಆದರೆ ನಿಜಕ್ಕೂ ಮನು ಸಿದ್ಧಾಂತ ದಲಿತ ರಾಷ್ಟ್ರಪತಿಯ ಕುರಿತಂತೆ ಯಾವ ಮನಸ್ಥಿತಿಯನ್ನು ಹೊಂದಿದೆ ಎನ್ನುವುದು ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಬಟಾ ಬಯಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪುರಿಯ ಜಗನ್ನಾಥ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ನೀಡಿದ್ದರು. ಆದರೆ ಗರ್ಭಗುಡಿಯ ಪ್ರವೇಶ ಸಂದರ್ಭದಲ್ಲಿ ರಾಷ್ಟ್ರಪತಿಯವರನ್ನು ತಡೆಯಲಾಗಿದೆ. ಅಷ್ಟೇ ಅಲ್ಲ, ರಾಷ್ಟ್ರಪತಿಯವರ ಪತ್ನಿಯನ್ನು ದೂಡಲಾಗಿದೆ. ದೇಶದ ಪಾಲಿಗೆ ಇದು ಅತ್ಯಂತ ಆಘಾತಕಾರಿ ಸಂಗತಿ. ದುರದೃಷ್ಟವಶಾತ್ ಇದು ಹೊರಜಗತ್ತಿಗೆ ತಿಳಿಯಲು ಎರಡು ತಿಂಗಳು ಬೇಕಾಯಿತು ಮತ್ತು ಇದೀಗ ಸರಕಾರ ಈ ಕುರಿತಂತೆ ತನಿಖೆಗೆ ಆದೇಶಿಸಿದೆ. ಪುರಿಯಲ್ಲಿ ರಾಷ್ಟ್ರಪತಿಗೆ ಆಗಿರುವ ಅವಮಾನ ಈ ದೇಶಕ್ಕಾಗಿರುವ ಅವಮಾನವಾಗಿದೆ ಮತ್ತು ಅದು ಸಾರ್ವಜನಿಕವಾಗಿ ನಡೆದಿದೆ. ಘಟನೆ ನಡೆದಾಕ್ಷಣವೇ ಸರಕಾರ ಕ್ರಮವನ್ನು ತೆಗೆದುಕೊಂಡು ಆ ಸ್ಥಾನದ ಘನತೆಯನ್ನು ಕಾಪಾಡಬೇಕಾಗಿತ್ತು. ಆದರೆ ರಾಷ್ಟ್ರಪತಿಯ ಘನತೆಗಿಂತ ಪುರೋಹಿತರ ಘನತೆ ಸರಕಾರಕ್ಕೆ ಮುಖ್ಯವಾಯಿತು. ಸರಕಾರ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿತು. ಆದುದರಿಂದಲೇ ಘಟನೆ ತೀರಾ ತಡವಾಗಿ ಬಹಿರಂಗವಾಯಿತು. ಕೋವಿಂದ್ ಅವರಿಗೆ ಆಗಿರುವ ಅವಮಾನ, ಆರೆಸ್ಸೆಸ್‌ನ ಹಿಂದುತ್ವದ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದೆ. ದಲಿತರು ಅದೆಷ್ಟೇ ಉನ್ನತ ಸ್ಥಾನಕ್ಕೆ ತಲುಪಿದರೂ ಅವರು ದೇವಸ್ಥಾನದ ಒಳಗೆ ಪ್ರವೇಶಿಸಲು ಅನರ್ಹರು ಎನ್ನುವ ಸಂದೇಶವನ್ನು ಈ ಮೂಲಕ ರವಾನಿಸಲಾಗಿದೆ.

ಕೋವಿಂದ್‌ರಂತೆಯೇ ಉಳಿದ ದಲಿತರೂ ಈ ಅವಮಾನವನ್ನು ಸಹಿಸಲು ಕಲಿಯಬೇಕು ಎನ್ನುವುದನ್ನು ಬಿಜೆಪಿ ಮತ್ತು ಆರೆಸ್ಸೆಸ್ ಹೇಳುತ್ತದೆ. ವರ್ಷಗಳ ಹಿಂದೆ ಬಿಜೆಪಿಯ ಸಂಸದರೊಬ್ಬರು ದೇವಸ್ಥಾನದ ಹೊರಗೆ ನಿಂತು ಪ್ರಸಾದವನ್ನು ಸ್ವೀಕರಿಸಿದ್ದು ತೀವ್ರಚರ್ಚೆಗೊಳಗಾಗಿತ್ತು. ‘‘ಅವರ ಭಾವನೆಗಳಿಗೆ ಧಕ್ಕೆಯಾಗಬಾರದು ಎಂದು ಹೊರಗೆ ನಿಂತು ಪ್ರಸಾದ ಸ್ವೀಕರಿಸಿದೆ’’ ಎಂದು ಆ ಬಿಜೆಪಿ ಸಂಸದ ಹೇಳಿದರು. ದುರದೃಷ್ಟವಶಾತ್ ಆ ಮೂಲಕ ಅವರು ಈ ದೇಶದ ಲಕ್ಷಾಂತರ ಜನ ದಲಿತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದನ್ನು ಮರೆತರು. ದುರಂತವೆಂದರೆ ಕೋವಿಂದ್ ಅವರಿಗೆ ಆದ ಅವಮಾನದ ವಿರುದ್ಧ ಬಿಜೆಪಿಯೊಳಗೇ ಪ್ರತಿಭಟನೆ ನಡೆಯಲಿಲ್ಲ. ಅಷ್ಟೇ ಯಾಕೆ, ವಿರೋಧ ಪಕ್ಷಗಳೂ ಇದನ್ನು ಗಂಭೀರ ಸಂಗತಿಯಾಗಿ ತೆಗೆದುಕೊಳ್ಳಲಿಲ್ಲ. ಕನಿಷ್ಠ ದಲಿತರ ಸಂಘಟನೆಗಳಾದರೂ ಇದರ ವಿರುದ್ಧ ಧ್ವನಿಯೆತ್ತಿವೆಯೇ ಎಂದರೆ ಅದೂ ಇಲ್ಲ. ಹೇಗೆ ಬಿಜೆಪಿ ‘ದಲಿತರನ್ನೇ ಮುಂದಿಟ್ಟು ದಲಿತರ ಬಾಯಿ ಮುಚ್ಚಿಸಲು ಹೊರಟಿದೆ, ದಲಿತರನ್ನು ಮತ್ತೆ ಮನುವಿನ ಊಳಿಗ ಮಾಡಿಸಲು ಮುಂದಾಗಿದೆ’’ ಎನ್ನುವುದಕ್ಕೆ ಪುರಿ ಘಟನೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ದೇಶದ ಜಾತಿ ಎನ್ನುವ ಗಾಯ ಎಷ್ಟು ಆಳವಾಗಿದೆ ಎನ್ನುವುದನ್ನು ಇದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News