ಹುಳಿಯಾರು: ಸಾಲ ಬಾಧೆ; ರೈತ ಆತ್ಮಹತ್ಯೆ
ಹುಳಿಯಾರು,ಜು.02: ಸಾಲ ಬಾಧೆಯಿಂದ ಬೇಸತ್ತ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹುಳಿಯಾರು ಠಾಣಾ ವ್ಯಾಪ್ತಿಯ ಭಟ್ಟರಹಳ್ಳಿಯಲ್ಲಿ ನಡೆದಿದೆ.
ಯಳನಾಡು ಪಂಚಾಯತ್ ನ ಭಟ್ಟರಹಳ್ಳಿಯ ಕೃಷಿಕ ಕಲ್ಲೇಗೌಡ ಬಿನ್ ವೀರಭದ್ರಯ್ಯ (46)ಎಂಬವರೇ ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಜಮೀನು ಅಭಿವೃದ್ಧಿಗೋಸ್ಕರ ಮಾಡಿಕೊಂಡಿದ್ದ ಬೆಳೆ ಸಾಲ, ಟ್ರ್ಯಾಕ್ಟರ್ ಸಾಲ ಹಾಗೂ ಒಡವೆ ಸಾಲ ಮೊದಲಾದವನ್ನು ತೀರಿಸಲಾಗದೆ ಬೇಸತ್ತು ಶನಿವಾರ ರಾತ್ರಿ ಮಾತ್ರೆ ನುಂಗಿ ತನ್ನ ಸ್ವಂತ ಜಮೀನಿನಲ್ಲಿ ಸಾವಿಗೆ ಶರಣಾಗಿದ್ದಾರೆ.
ಭಾನುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಹುಳಿಯಾರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಶಾಸಕ ಜೆ.ಸಿ.ಮಾಧುಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಮೃತರು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 3 ಲಕ್ಷ ಬೆಳೆಸಾಲ, ಸುಮಾರು 1 ವರ್ಷದ ಹಿಂದೆ ಒಡವೆಗಳನ್ನು ಬ್ಯಾಂಕಿನಲ್ಲಿ ಇಟ್ಟು 2 ಲಕ್ಷ ಸಾಲ, ಈ ಸಾಲವನ್ನು ತೀರಿಸಲು ಹಲವಾರು ಕಡೆ ಕೈಸಾಲವನ್ನು ಮಾಡಿಕೊಂಡಿದ್ದು, ಸಾಲ ಮತ್ತು ಬಡ್ಡಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರಿಂದ ತೀರಿಸಲು ಆಗುತ್ತಿಲ್ಲ ಎಂದು ನಿತ್ಯ ಕೊರಗುತ್ತಿದ್ದರು' ಎಂದು ಮೃತರ ಪತ್ನಿ ತಿಳಿಸಿದ್ದಾರೆ.