×
Ad

‘ಹಜ್‌ ಯಾತ್ರಿಗಳಿಂದ ದುಬಾರಿ ಪ್ರಯಾಣ ದರ ಸ್ವೀಕಾರ’

Update: 2018-07-02 19:30 IST

ಬೆಂಗಳೂರು, ಜು.2: ರಾಜ್ಯದಿಂದ ಪವಿತ್ರ ಹಜ್‌ ಯಾತ್ರೆ ಕೈಗೊಳ್ಳುತ್ತಿರುವ ಯಾತ್ರಿಗಳಿಂದ ದುಬಾರಿ ವಿಮಾನ ಪ್ರಯಾಣ ದರ ಸ್ವೀಕರಿಸುತ್ತಿರುವ ವಿಚಾರವನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಸೋಮವಾರ ವಿಧಾನಸಭೆಯ ಮೊಗಸಾಲೆಯಲ್ಲಿ ‘ವಾರ್ತಾಭಾರತಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹಜ್‌ಯಾತ್ರಿಗಳ ಪ್ರಯಾಣ, ಪವಿತ್ರ ಮಕ್ಕಾ ಹಾಗೂ ಮದೀನಾ ನಗರಗಳಲ್ಲಿ ಅವರ ವಾಸ್ತವ್ಯಕ್ಕೆ ಮಾಡುತ್ತಿರುವ ವ್ಯವಸ್ಥೆ, ಅವರು ಲಗೇಜ್ ಸಾಗಾಣಿಕೆಗೆ ಪಡೆಯುತ್ತಿರುವ ಶುಲ್ಕ ಎಲ್ಲವೂ ಹೆಚ್ಚಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.

ನಾನು ಸಚಿವನಾದ ನಂತರ ಹಜ್ ಸಮಿತಿಯ ಅಧಿಕಾರಿಗಳೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ಎಲ್ಲ ಅಂಶಗಳು ನನ್ನ ಗಮನಕ್ಕೆ ಬಂದಿವೆ. ಕೇಂದ್ರ ಸರಕಾರ ಹಾಗೂ ಭಾರತೀಯ ಹಜ್ ಸಮಿತಿಯ ಬದಲು, ನಾವೇ ನಮ್ಮ ರಾಜ್ಯದ ಯಾತ್ರಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿದರೆ ಈಗ ಪಡೆಯುತ್ತಿರುವ ಶುಲ್ಕದಲ್ಲಿ ಒಬ್ಬ ಯಾತ್ರಿಗೆ ಕನಿಷ್ಠ 70 ಸಾವಿರ ರೂ.ಗಳ ಉಳಿತಾಯವಾಗುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯ ಹಜ್ ಸಮಿತಿಯು ನಮ್ಮ ಯಾತ್ರಿಗಳಿಂದ ಪಡೆಯುತ್ತಿರುವ ಶುಲ್ಕಕ್ಕೆ ಹೋಲಿಸಿದರೆ ಮಕ್ಕಾದಲ್ಲಿ ಅಝೀಝಿಯಾ ವರ್ಗದವರಿಗೆ ನೀಡುತ್ತಿರುವ ವಸತಿ ಸೌಲಭ್ಯವು ಅಷ್ಟೇನು ಉತ್ತಮವಾಗಿಲ್ಲ. ಕಅಬಾ ಭವನದ ಸಮೀಪವೆ ವಾಸ್ತವ್ಯದ ವ್ಯವಸ್ಥೆ ಮಾಡಲು ಸಾಧ್ಯವಿದೆ. ಆದರೂ, ಯಾವ ಕಾರಣಕ್ಕಾಗಿ ನಮ್ಮ ಯಾತ್ರಿಗಳಿಗೆ ದೂರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಯಾವ ಸಬ್ಸಿಡಿಯ ಅಗತ್ಯವೂ ನಮಗಿಲ್ಲ. ಸೌದಿ ಅರೇಬಿಯಾ ಸರಕಾರವು ಭಾರತಕ್ಕೆ ಹಂಚಿಕೆ ಮಾಡುವ ಹಜ್‌ಯಾತ್ರಿಗಳ ಕೋಟಾದಲ್ಲಿ ನಮ್ಮ ರಾಜ್ಯಕ್ಕೆ ನಿಗದಿತ ಪಾಲನ್ನು ಹಂಚಿಕೆ ಮಾಡಿದರೆ ಸಾಕು. ನಮ್ಮ ರಾಜ್ಯದಿಂದ ತೆರಳುವ ಯಾತ್ರಿಗಳ ಪ್ರಯಾಣ, ವಾಸ್ತವ್ಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನಾವೇ ಕಲ್ಪಿಸಿಕೊಡಲು ಸಿದ್ಧವಿರುವುದಾಗಿ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.

ನಮ್ಮ ಮನವಿಗೆ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರಸಕ್ತ ಸಾಲಿನ ಹಜ್ ಯಾತ್ರೆಯ ಚಟುವಟಿಕೆಗಳು ಪೂರ್ಣಗೊಂಡ ನಂತರ ಮತ್ತೊಮ್ಮೆ ಹೊಸದಿಲ್ಲಿಗೆ ಬನ್ನಿ, ಈ ಎಲ್ಲ ವಿಚಾರಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸೋಣವೆಂದು ತಿಳಿಸಿದ್ದಾರೆ ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ರಾಜ್ಯದಿಂದ ಈ ಬಾರಿ ಹಜ್ ಯಾತ್ರೆಗೆ ತೆರಳಲು ಸುಮಾರು 18 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 6,624 ಮಂದಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಸುಮಾರು 11,500 ಅರ್ಜಿಗಳು ನಿರೀಕ್ಷಣ ಪಟ್ಟಿಯಲ್ಲಿವೆ. ಆದುದರಿಂದ, ಈ ಬಾರಿಗೆ ನಮಗೆ ಎರಡು ಸಾವಿರ ಕೋಟಾ ಹೆಚ್ಚಳ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.

'ಸಚಿವರಾದ ಬಳಿಕ ಮೊದಲ ಬಾರಿ ನೀವು ಬಂದಿದ್ದೀರ. ಎರಡು-ಮೂರು ತಿಂಗಳು ಮುಂಚಿತವಾಗಿ ಬಂದಿದ್ದರೆ, ಏನಾದರೂ ಪ್ರಯತ್ನ ಮಾಡಬಹುದಿತ್ತು. ಆದರೂ, ಐದಾರು ದಿನಗಳ ನಂತರ ಈ ಬಗ್ಗೆ ಸಭೆಯೊಂದು ನಡೆಯಲಿದ್ದು, ಆನಂತರ ಕನಿಷ್ಠ 1 ಸಾವಿರ ಕೋಟಾ ಹೆಚ್ಚಳ ಮಾಡಲು ಪ್ರಯತ್ನಿಸುವುದಾಗಿ ಮುಖ್ತಾರ್ ಅಬ್ಬಾಸ್ ನಖ್ವಿ ಭರವಸೆ ನೀಡಿದ್ದಾರೆ ಎಂದು ಝಮೀರ್‌ಅಹ್ಮದ್ ತಿಳಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾತ್ರಿಗಳ ಮೊದಲ ತಂಡವು ಆಗಸ್ಟ್ 1ರಂದು ಮುಂಜಾನೆ ಪ್ರಯಾಣ ಬೆಳೆಸಲಿದೆ. ಜುಲೈ 31ರಂದು ವಿಮಾನಯಾನಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದು ಝಮೀರ್‌ಅಹ್ಮದ್‌ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News