‘ವೇದಾಂತದ ಮೆದುಳು, ಇಸ್ಲಾಮಿನ ದೇಹ’ ಎಂಬ ವಿವೇಕಾನಂದರ ಮಾತನ್ನು ಅರ್ಥೈಸಿಕೊಳ್ಳಬೇಕು: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಜು.2: ವೇದಾಂತದ ಮೆದುಳು, ಇಸ್ಲಾಮಿನ ದೇಹ ಎಂಬ ಸ್ವಾಮಿ ವಿವೇಕಾನಂದ ಮಾತನ್ನು, ವಿವೇಕಾನಂದರ ಹೆಸರು ಬಳಸಿಕೊಳ್ಳುವವರು ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹೀಮ ಸುತಾರ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕಣ್ಣಿನ ಎದುರುಗಡೆ ಭಾವೈಕ್ಯ ಭಾರತ ಮತ್ತು ಮತಾಂಧ ಭಾರತ ಎಂಬ ಎರಡು ಆಯ್ಕೆಗಳಿವೆ. ಇಂತಹ ಸಂದರ್ಭದಲ್ಲಿ ವಿವೇಕಾನಂದರ ವೇದಾಂತದ ಮೆದುಳು ಮತ್ತು ಇಸ್ಲಾಮಿನ ದೇಹ ಸಮ್ಮಿಲನವಾಗಬೇಕು ಎಂಬ ಮಾತಿನ ವಿಶಾಲ ಅರ್ಥವನ್ನು ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಭಾರತ ಇಂದು ನಕಾರಾತ್ಮಕವಾಗಿ ಬದಲಾಗುತ್ತಿದ್ದು, ಸಮಾನತೆಯನ್ನು ಹಿಂದೆ ಸರಿಸಿ, ಜಾತಿ, ಧರ್ಮ, ಕೋಮುವಾದ ಮುನ್ನೆಲೆಗೆ ಬರುತ್ತಿದೆ. ಈ ವೇಳೆ ಧರ್ಮ ಮತ್ತು ದೇವರ ಕಲ್ಪನೆಯ ಸಕಾರಾತ್ಮಕ ಅಂಶಗಳನ್ನು ಬಳಸಿಕೊಂಡು ಜಾತಿ ಮತ್ತು ಧರ್ಮದ ಜಾಢ್ಯವನ್ನು ತೊಲಗಿಸಬೇಕು. ಅಲ್ಲದೆ, ಜಾತಿ ಜಾಢ್ಯ ಮತ್ತು ಕೋಮ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಸೂಫಿ-ಸಂತರ ಸಾಹಿತ್ಯವೂ ಅಗತ್ಯ ಔಷಧವನ್ನು ನೀಡುತ್ತದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಭಕ್ತಿ ಬಂಡವಾಳ ಮಾಡಿಕೊಳ್ಳಲಾಗಿದೆ. ದೇವರನ್ನು ತಮ್ಮ ಮನಸ್ಸಿನೊಳಗೆ ಕಾಣಬೇಕೆ ಹೊರತು ಬೀದಿಗೆ ತಂದು ನಿಲ್ಲಿಸುವುದು ಭಕ್ತಿಯಲ್ಲ ಎಂದ ಅವರು, ಮಾನವೀಯತೆ ಇರಬೇಕಾದ ಸ್ಥಳದಲ್ಲಿ ಮತೀಯತೆ ವಿಜೃಂಭಿಸುತ್ತಿದೆ. ವಿಚಾರಗಳಿರಬೇಕಾದ ಜಾಗವನ್ನು ವಿಕಾರಗಳು ಆಕ್ರಮಿಸಿಕೊಂಡಿವೆ. ಪೈರು ಬೆಳೆಯುವ ಭೂಮಿಯಲ್ಲಿ ಬಂದೂಕುಗಳನ್ನು ಬೆಳೆಸುತ್ತಿದ್ದೇವಾ ಎಂಬ ಆತಂಕದ ವಾತಾವರಣದಲ್ಲಿ ಬದುಕುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚಿಗೆ ನಡೆದ ಸಂತ ಕಬೀರ 500 ನೆ ವರ್ಷಾಚರಣೆಯಲ್ಲಿ ರಾಷ್ಟ್ರ ನಾಯಕರು ಕಬೀರನ ಹೆಸರನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ದುರಂತ ಎಂದ ಬರಗೂರು, ಇತ್ತೀಚಿನ ದಿನಗಳಲ್ಲಿ ಜಾತಿ ಗುರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಾತಿ ರಾಜಕಾರಣ, ಧರ್ಮ ರಾಜಕಾರಣ ಮತ್ತು ಪಕ್ಷ ರಾಜಕಾರಣ ಒಂದರಲ್ಲಿ ಒಂದು ಬೆರೆಸಿಕೊಂಡಿರುವ ಸಂದಿಗ್ಧ ಸ್ಥಿತಿ ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸೌಹಾರ್ದತೆಯನ್ನು ಸ್ಥಾಪಿಸುವ ಅಗತ್ಯವಿದೆ. ಅದಕ್ಕೆ ಸುತಾರ ಅಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಇಬ್ರಾಹೀಮ ಸುತಾರ, ನಮ್ಮ ಧರ್ಮ ಮತ್ತು ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಧರ್ಮ ಗ್ರಂಥವನ್ನು ಓದುವುದರ ಜೊತೆಗೆ ಬೇರೆ ಧರ್ಮ ಗ್ರಂಥದ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಅನಂತರ ಮತ್ತೊಬ್ಬರ ಧರ್ಮವನ್ನು ಗೌರವಿಸಬೇಕು. ಇದು ನಿಜವಾದ ಭಾವೈಕ್ಯತೆಯಾಗಿದ್ದು, ಅದನ್ನು ಸಾಧಿಸಲು ವಿಶಾಲವಾದ ಭಾವನೆ ಇರಬೇಕು ಎಂದು ಅವರು ನುಡಿದರು.
ಎಲ್ಲ ಧರ್ಮ ಗ್ರಂಥಗಳಲ್ಲಿ ಪರಮಾತ್ಮನ ಬಗ್ಗೆ ಉಲ್ಲೇಖ ಮಾಡಲಾಗಿದೆ. ಎಲ್ಲವನ್ನೂ ಪ್ರಾಮಾಣಿಕವಾಗಿ ಹಾಗೂ ಕೂಲಂಕಷವಾಗಿ ಓದಿದರೆ ಎಲ್ಲದರಲ್ಲಿ ಹೇಳಿರುವುದು ಒಂದೇ ಎಂಬುದು ಅರ್ಥವಾಗುತ್ತದೆ. ಆದರೆ, ಇಂದಿನ ಸಂದರ್ಭದಲ್ಲಿ ಯಾವುದನ್ನೂ ಓದದೇ ಧರ್ಮ, ಧರ್ಮಗಳ ನಡುವೆ ಸಾಮರಸ್ಯವನ್ನು ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೇವರನ್ನು ಹುಡುಕಿಕೊಂಡು ಹೋಗುವುದು ಧರ್ಮವಲ್ಲ. ದೇವರನ್ನು ನಮ್ಮಲ್ಲೇ ಹುಡುಕಿಕೊಳ್ಳಬೇಕು. ದೇಹವೇ ದೇವಾಲಯ, ಜೀವವೇ ದೇವರು ಎಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ ಪ್ರತಿಯೊಂದು ಕಣಕಣದಲ್ಲಿಯೂ ದೇವರನ್ನು ಕಾಣಬೇಕು ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್ ಅಹಮದ್, ವಿಶ್ರಾಂತ ಕುಲಪತಿ ಪ್ರೊ.ಕೆ.ಆರ್.ಇಕ್ಬಾಲ್ ಅಹಮದ್, ಹಿರಿಯ ಸಾಹಿತಿ ಡಾ.ಕೆ.ಷರೀಪಾ, ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಉಪಸ್ಥಿತರಿದ್ದರು.
ಎಲ್ಲರ ಭಾವನೆಗಳು ಎಲ್ಲಿ ಐಕ್ಯವಾಗುತ್ತದೆಯೋ ಅದೇ ನಿಜವಾದ ಭಾವೈಕ್ಯತೆ. ಭಿನ್ನ ಭಿನ್ನ ಹೆಸರಿನಲ್ಲಿ ಹುಟ್ಟಿ ಹರಿಯುವ ನದಿಗಳು ಕೊನೆಗೆ ಸಮುದ್ರಕ್ಕೆ ಸೇರುತ್ತವೆ. ಅಲ್ಲಿ ಇದು ಕಾವೇರಿ, ಯಮುನಾ, ನೇತ್ರಾವತಿ ಎಂಬುದು ತಿಳಿಯುವುದಿಲ್ಲ. ಅದೇ ರೀತಿ ಎಲ್ಲ ಸಿದ್ಧಾಂತಗಳು ಭಿನ್ನವಾಗಿದ್ದು, ಎಲ್ಲವೂ ಸೇರಿದಾಗ ಭಾವೈಕ್ಯತೆಯಾಗುತ್ತದೆ.
-ಇಬ್ರಾಹೀಮ ಸುತಾರ, ಪದ್ಮಶ್ರೀ ಪುರಸ್ಕೃತರು