ಮೈಸೂರು: ಆಯ್ಕೆ ಆಧಾರಿತ ಗಣಕ ಪದ್ಧತಿಯಲ್ಲಿ ಕನ್ನಡ ಭಾಷೆ ಕಡೆಗಣನೆ ಖಂಡಿಸಿ ಪ್ರತಿಭಟನೆ
ಮೈಸೂರು,ಜು.2: ಆಯ್ಕೆ ಆಧಾರಿತ ಗಣಕ ಪದ್ಧತಿಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವುದರ ವಿರುದ್ಧ ಹಾಗೂ ಹೊಸ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಾಪಕರುಗಳು ಪ್ರತಿಭಟನೆ ನಡೆಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರು, ಇಂಗ್ಲಿಷ್ ಭಾಷೆಗೆ ನೀಡಿರುವ ವಿಶೇಷ ಮಾನ್ಯತೆ ದೇಶ ಭಾಷೆಗಳ ಅಧ್ಯಯನಕ್ಕೆ ನೀಡಿಲ್ಲದಿರುವುದು ದುರಂತ. ಯುಜಿಸಿ ಪಠ್ಯಕ್ರಮದಲ್ಲಿ ತಮಿಳು, ತೆಲುಗು ಮುಂತಾದ ಭಾರತೀಯ ಭಾಷೆಯ ಪಠ್ಯಕ್ರಮವಿದೆ. ಕನ್ನಡ ಭಾಷೆಯ ಪಠ್ಯಕ್ರಮದ ಬಗ್ಗೆ ಪ್ರಸ್ತಾಪವೇ ಇಲ್ಲ. ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ ಎಂಬ ತಾರತಮ್ಯವಿಲ್ಲದೇ ಕನ್ನಡ ಭಾಷಾ ಬೋಧನೆಯನ್ನು ಕಡ್ಡಾಯವಾಗಿಡಬೇಕು ಹಾಗೂ ಪದವಿ ಪರೀಕ್ಷಾ ಮಂಡಳಿಗೆ ಅಧ್ಯಕ್ಷರಾಗಿ ಪದವಿ ಅಧ್ಯಾಪಕರನ್ನೇ ನೇಮಿಸಬೇಕೆಂದು ಒತ್ತಾಯಿಸಿದರು. ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಾಹಿತಿಗಳಾದ ಡಾ.ಸಿಪಿಕೆ, ಬನ್ನೂರು ಕೆ.ರಾಜು,ಚಿಂತಕ ಪ.ಮಲ್ಲೇಶ್, ಪ್ರೊ.ಮೊರಬದ ಮಲ್ಲಿಕಾರ್ಜುನ. ಪ್ರೊ.ಕೃಷ್ಣೇಗೌಡ, ಪ್ರೊ.ಜಿ.ಟಿ.ವೀರಪ್ಪ, ಪ್ರೊ.ಸಿ.ಪಿ,ಸಿದ್ದಾಶ್ರಮ, ಮಡ್ಡಿಕೆರೆ ಗೋಪಾಲ್, ಡಾ.ರಾಮಚಂದ್ರೇಗೌಡ, ಡಾ.ಎ.ರಂಗಸ್ವಾಮಿ, ಡಾ.ಪ್ರಭುಸ್ವಾಮಿ, ಡಾ.ಎನ್.ಎಂ.ತಳವಾರ್, ಹೊರೆಯಾಲ ದೊರೆಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.