ರಾಜಕೀಯ ವೈಷಮ್ಯಕ್ಕಾಗಿ ಮಠವನ್ನು ಎಳೆದು ತರಬೇಡಿ: ಶಾಸಕ ವಿಶ್ವನಾಥ್ ಗೆ ಕಾಗಿನೆಲೆ ಮಠದ ಭಕ್ತ ವೃಂದ ಮನವಿ

Update: 2018-07-02 16:57 GMT

ಮೈಸೂರು,ಜು.2: ರಾಜಕೀಯ ವೈಷಮ್ಯ ಹಾಗೂ ವೈಯುಕ್ತಿಕ ತಿಕ್ಕಾಟಗಳಿಗೆ ಮಠವನ್ನು ಎಳೆದು ತರಬೇಡಿ ಎಂದು ಶಾಸಕ ಎಚ್.ವಿಶ್ವನಾಥ್ ಅವರಿಗೆ ಕಾಗಿನೆಲೆ ಮಠದ ಭಕ್ತ ವೃಂದವು ಮನವಿ ಮಾಡಿತು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಠದ ಭಕ್ತ ವರಕೂಡು ಉಮೇಶ್, ನನಗೆ ನೋವಾಗಿದ್ದಾಗ ಸ್ವಾಮೀಜಿಗಳು ಹಾಗೂ ಮಠವು ಎಲ್ಲಿ ಹೋಗಿದ್ದರು ಎಂದು ಶ್ರೀಮಠವನ್ನು ಗುರಿಯಾಗಿರಿಸಿಕೊಂಡು ವಿಶ್ವನಾಥ್ ನೀಡಿರುವ ಹೇಳಿಕೆಯನ್ನು ಖಂಡಿಸಿದರು. ಮಠದೊಳಗೆ ಬಗೆಹರಿಸಿಕೊಳ್ಳಬೇಕಾದಂತ ವಿಷಯವನ್ನು ಬಹಿರಂಗ ಹೇಳಿಕೆ ನೀಡುವುದು ಹಿರಿಯರಾದ ತಮಗೆ ಶೋಭೆ ತರುವುದಿಲ್ಲ ಎಂದರು.

ಕಳೆದೊಂದು ವರ್ಷದಿಂದ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸಕ್ರಿಯರಾಗಿರಲಿಲ್ಲ. ಹೀಗೆಂದು ವಿಶ್ವನಾಥ್ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿ, ಮಾಜಿ ಸಿಎಂ ಹಾಗೂ ವಿಶ್ವನಾಥ್ ನಡುವೆ ನಡೆಯುತ್ತಿರುವ ತಿಕ್ಕಾಟವನ್ನು ಬಗೆಹರಿಸಲು ಮುಂದಿನ ವಾರದೊಳಗೆ ಮಠದಲ್ಲಿ ಸಭೆ ಆಯೋಜಿಸಲಾಗುತ್ತಿದ್ದು ಇವರಿಬ್ಬರು ಮುಖಾಮುಖಿಯಾಗುವರು ಎಂದು ಹೇಳಿದರು.

ನಮ್ಮ ಜನಾಂಗದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಡೆಸಿದ ವರ್ಗಾವಣೆ ವಿರುದ್ದ ಶ್ರೀಗಳು ಧ್ವನಿ ಎತ್ತಿದ್ದರೇ ವಿನಃ, ಮಠವು ಮಾಜಿ ಸಿಎಂ ಸಿದ್ದರಾಮಯ್ಯನವರ ಪರವಾಗಿ ಇಲ್ಲ. ರಾಯಣ್ಣ ಬ್ರಿಗೇಡ್ ಕಟ್ಟಿದಾಗ ಕೆ.ಎಸ್.ಈಶ್ವರಪ್ಪನವರನ್ನು ಬೆನ್ನು ತಟ್ಟಿತ್ತು. ಅಲ್ಲದೇ ಬಂಡೇಪ್ಪ ಕಾಶಂಪುರ ಅವರನ್ನು ಅಶೀರ್ವದಿಸಿದ್ದಾರೆ ಎಂದು ತಿಳಿಸಿದರು.

ಜು.27ರಂದು ಕಾಗಿನೆಲೆಯಲ್ಲಿ ನಡೆಯುತ್ತಿರುವ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಜು.3ರಂದು ಸಿದ್ದಾರ್ಥ ನಗರದ ಶಾಖಾಮಠದಲ್ಲಿ ಬೆಳಗ್ಗೆ 11ಕ್ಕೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿದ್ದು, ಸಮಾಜದವರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಮಠದ ಭಕ್ತರಾದ ಅಭಿಷೇಕ್ ಶಿವಣ್ಣ, ಮಹೇಶ್ ರಾಮಯ್ಯ, ಕಾಡನಹಳ್ಳಿ ಸ್ವಾಮಿಗೌಡ ಹಾಗೂ ಮೈಸೂರು ಬಸವಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News