×
Ad

ಮಂಡ್ಯ: ಕೊಲೆ ಆರೋಪಿ ಮಹಿಳೆಗೆ ಜೀವಾವಧಿ ಶಿಕ್ಷೆ

Update: 2018-07-02 22:32 IST

ಮಂಡ್ಯ, ಜು.2: ಕೊಲೆ ಆರೋಪಿ ಮಹಿಳೆಗೆ ನಗರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಅಮರ್ ನಾರಾಯಣ್ ಐಪಿಸಿ ಕಲಂ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ  ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ತಾಲೂಕಿನ ಮಂಗಲ ಗ್ರಾಮದ ಲಕ್ಷ್ಮಿ ಅಲಿಯಾಸ್ ಕುಳ್ಳಿ ಶಿಕ್ಷೆಗೆ ಗುರಿಯಾದ ಮಹಿಳೆಯಾಗಿದ್ದು, ಈಕೆ ಅದೇ ಗ್ರಾಮದ ಭಾಗ್ಯ ಎಂಬವರನ್ನು ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ.

ದಂಡ ಕೊಡಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಶಿಕ್ಷೆ ವಿಧಿಸಿರುವುದಲ್ಲದೆ, ಐಪಿಸಿ 450ರ ಅಡಿಯ ಅಪರಾಧಕ್ಕೆ 2 ವರ್ಷ ಕಾರಾಗೃಹ ಶಿಕ್ಷೆ ಮತ್ತು 2 ಸಾವಿರ ರೂ. ದಂಡ, ಕಲಂ 392ರ ಅಪರಾಧಕ್ಕೆ 2 ವರ್ಷ ಸಾದಾ ಶಿಕ್ಷೆ ಮತ್ತು 3 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಶಿಕ್ಷೆಗೊಳಗಾಗಿರುವ ಲಕ್ಷ್ಮಿ ಪಿತೃಪಕ್ಷದ ಎಣ್ಣೆ ಚೀಟಿ ಹಾಕಿಸಿಕೊಂಡಿದ್ದು, ಚೀಟಿಗೆ ತೆಗೆದುಕೊಂಡಿದ್ದ 10 ಸಾವಿರ ರೂ.ಗಳ ಸಾಲ ತೀರಿಸಲು ಆಗದೆ ಇದ್ದ ಕಾರಣ, ಭಾಗ್ಯಳ ಮನೆಗೆ ಹೋಗಿ ಕೊಲೆ ಮಾಡಿ ಹಣವನ್ನು ಪಡೆಯಲು ಸಂಚು ರೂಪಿಸಿಕೊಂಡಿದ್ದಳು. ಅಂತೆಯೇ 10.9.2014ರ ಬೆಳಗ್ಗೆ ಲಕ್ಷ್ಮಿ ಭಾಗ್ಯಳ ಮನೆಗೆ ಹೋಗಿ ಹಣ ಕೇಳಿದ್ದು, ಅದಕ್ಕೆ ಆಕೆ ನಿರಾಕರಿಸಿದ್ದಾಳೆ. ಮೊದಲೇ ಸಂಚು ರೂಪಿಸಿಕೊಂಡಿದ್ದಂತೆ ಲಕ್ಷ್ಮಿ ಜತೆಯಲಿ ತೆಗೆದುಕೊಂಡು ಹೋಗಿದ್ದ ಲಾಡಿ ದಾರವನ್ನು ಭಾಗ್ಯಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಳು.

ಯಾರೋ ಗಂಡಸರು ಹಣಕ್ಕೋಸ್ಕರ ಭಾಗ್ಯಳನ್ನು ಕೊಲೆ ಮಾಡಿರಬಹುದೆಂದು ತಿಳಿದುಕೊಳ್ಳಲೆಂದು ಲಕ್ಷ್ಮಿ ಭಾಗ್ಯಳನ್ನು ಕೊಲೆ ಮಾಡಿದ ನಂತರ, ವಿಸ್ಕಿ ಮತ್ತು ಮಿಕ್ಸರ್ ಖಾರವನ್ನು ಭಾಗ್ಯಳ ಮನೆಯ ಮಂಚದ ಮೇಲಿಟ್ಟು, ಬೀರುವಿನಲ್ಲಿದ್ದ 9 ಸಾವಿರ ರೂ. ತೆಗೆದುಕೊಂಡು ಕಾಲ್ಕಿತ್ತಿದ್ದಳು.

ಅನುಮಾನ ಬರಬಾರದೆಂದು ತನಗೆ ಅಪಘಾತವಾಗಿದೆ ಎಂದು ಹೇಳಿಕೊಂಡು ಮಂಡ್ಯದ ಸೇವಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಳು. 
ಪ್ರಕರಣ ದಾಖಲಿಸಿಕೊಂಡಿದ್ದ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ಭೇದಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಎಸ್.ಟಿ.ಸುಧಾ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News