×
Ad

ನಾಗಮಂಗಲ: ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಬೈಕ್, ಹಣ ದೋಚಿ ಪರಾರಿ

Update: 2018-07-02 22:37 IST

ನಾಗಮಂಗಲ, ಜು.2: ಅಪರಿಚಿತ ದುಷ್ಕರ್ಮಿಗಳು ಯುವಕನೋರ್ವನ ಮೇಲೆ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ರಸ್ತೆ ಬದಿಗೆ ಎಸೆದು ಆತನ ಬೈಕ್ ಮತ್ತು ಹಣ ದೋಚಿ ಪರಾರಿಯಾಗಿರುವ ಘಟನೆ ಮೇಲುಕೋಟೆ ಎಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ತಾಲೂಕಿನ ದೆವಲಾಪುರ ಹೋಬಳಿಯ ನಾಗನಹಳ್ಳಿ ಗ್ರಾಮದ  ಡ್ರೈವರ್ ಪ್ರದೀಪ್ ಎಂಬ ಯುವಕನೇ ಹಲ್ಲೆಗೊಳಗಾಗಿ ಅರೆಪ್ರಜ್ಞೆ ತಲುಪಿರುವ ವ್ಯಕ್ತಿ. ಈತ ಬೆಂಗಳೂರಿನಿಂದ ಪಾಂಡವಪುರಕ್ಕೆ ಕೆಲಸದ ನಿಮಿತ್ತ ಹೋಗಿದ್ದ ಎನ್ನಲಾಗಿದ್ದು, ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಮೇಲುಕೋಟೆಯ ತೊಟ್ಟಿಲುಮಡ ಬಳಿ ಬೈಕ್‍ಗಳಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಚಾಕು ಮತ್ತು ಕಬ್ಬಿಣದ ರಾಡಿನಿಂದ ದಾಳಿ ಮಾಡಿ ರಸ್ತೆ ಬದಿಗೆ ಎಸೆದು ಆತನ ಬೈಕ್ ಮತ್ತು ಅವನ ಬಳಿ ಇದ್ದ ಹತ್ತು ಸಾವಿರ ರೂಗಳನ್ನೂ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈತ ಪ್ರಜ್ಞಾಹೀನನಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬಹಳ ಸಮಯದ ನಂತರ ದಾರಿ ಹೋಕರ ಗಮನಕ್ಕೆ ಬಂದಿದ್ದು, ತಕ್ಷಣವೇ  ನಾಗಮಂಗಲ ಜನರಲ್ ಆಸ್ಪತ್ರೆಗೆ ಕರೆತಂದಿದ್ದಾರೆ. ದೇಹದಿಂದ ತೀವ್ರ ರಕ್ತಹೋಗಿ, ಕರುಳು ಕೂಡ ಹೊರಬಂದಿದ್ದರಿಂದ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಈ ಸಂಬಂಧ ನಾಗಮಂಗಲ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News