ಮಾನಸ ಸರೋವರ ಯಾತ್ರಾರ್ಥಿಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಲು ಸಿ.ಎಂ ಕುಮಾರಸ್ವಾಮಿ ಸೂಚನೆ
ಬೆಂಗಳೂರು, ಜು.2: ಮಾನಸ ಸರೋವರ ಯಾತ್ರೆ ಕೈಗೊಂಡು ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 200ಕ್ಕೂ ಹೆಚ್ಚು ಯಾತ್ರಾರ್ಥಿಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ
ಈ ಸಂಬಂಧ ಎಲ್ಲಾ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ದೆಹಲಿಯ ಕರ್ನಾಟಕ ಭವನ ದಲ್ಲಿರುವ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಸ್ಥಾನಿಕ ಆಯುಕ್ತರು ನೇಪಾಳ ಸರ್ಕಾರ ಭಾರತ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು, ಧಾರವಾಡ, ಗುಲ್ಬರ್ಗ ಮತ್ತು ಹಾಸನದ ಪ್ರವಾಸಿಗರು ಅಮರನಾಥ, ಕೈಲಾಸ, ಮಾನಸ ಸರೋವರ ಪ್ರವಾಸ ಕೈಗೊಂಡಿದ್ದರು. ಇನ್ನು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಭಾರತ, ನೇಪಾಳ ಮತ್ತು ಟಿಬೆಟ್ ರಾಯಭಾರ ಕಚೇರಿ ಅಧಿಕಾರಿಗಳು ನೆರವಿಗೆ ಬಂದಿದ್ದಾರೆ. ಈಗಾಗಲೇ ಪ್ರವಾಸಿಗರ ರಕ್ಷಣೆಗೆ ಮುಂದಾಗಿರುವ ಕರ್ನಾಟಕ ಸರ್ಕಾರ, ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿದೆ. ಅಲ್ಲದೆ ಕೆಲವರೊಂದಿಗೆ ಸಂಪರ್ಕ ಸಾಧಿಸಿ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ ಎನ್ನಲಾಗಿದೆ.
ನೀರು, ಆಹಾರ ಮತ್ತು ಸಂಚಾರದ ವ್ಯವಸ್ಥೆ ಮಾಡುತ್ತಿರುವ ಅಧಿಕಾರಿಗಳು, ಬೇರೆ ಮಾರ್ಗದಿಂದ ಪ್ರವಾಸಿಗರನ್ನು ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ. ಹೆಲೆಕಾಪ್ಟರ್ ಗಳನ್ನು ಬಳಸಿ ಸುರಕ್ಷಿತ ಜಾಗಕ್ಕೆ ಕರತರುವ ಪ್ರಯತ್ನವೂ ನಡೆಯುತ್ತಿದೆ. ರಾಜ್ಯ ಸರ್ಕಾರ ನೇಪಾಳದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಕರ್ನಾಟಕದ ಯಾತ್ರಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರು ತಿಳಿಸಿದ್ದಾರೆ.