ಶಿವಮೊಗ್ಗ: ಕಾಲುಜಾರಿ ಬಿದ್ದು ಜಿಂಕೆ ಸಾವು
ಶಿವಮೊಗ್ಗ, ಜು. 2: ಕಾಲುಜಾರಿ ಕೆಳಕ್ಕೆ ಬಿದ್ದ ಜಿಂಕೆಯೊಂದು ಮೃತಪಟ್ಟ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಸುಳುಗೋಡು ಎಂಬಲ್ಲಿ ನಡೆದಿದೆ.
ಸುಮಾರು 15 ರಿಂದ 20 ಅಡಿ ಮೇಲಿಂದ ಜಿಂಕೆ ಕೆಳಕ್ಕೆ ಬಿದ್ದಿದೆ. ಕೊಂಬು ಅಡಿಯಾಗಿ ಬಿದ್ದ ಪರಿಣಾಮ, ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿದೆ. ಸೋಮವಾರ ಜಿಂಕೆ ಮೃತಪಟ್ಟಿರುವುದನ್ನು ಗಮನಿಸಿದ ಸ್ಥಳೀಯರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳು, ಘಟನಾ ಸ್ಥಳದ ಕೂಲಂಕಷ ಪರಿಶೀಲನೆ ನಡೆಸಿದ್ದಾರೆ. ಜಿಂಕೆಯ ಸಾವಿನ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂಬುವುದರ ತಪಾಸಣೆ ನಡೆಸಿದ್ದಾರೆ. ಜೊತೆಗೆ ಜಿಂಕೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮೇಲಿಂದ ಕೆಳಕ್ಕೆ ಬಿದ್ದ ಕಾರಣದಿಂದಲೇ ಜಿಂಕೆ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ. ಅರಣ್ಯ ಇಲಾಖೆ ಕಾಯ್ದೆಯಂತೆ ಮೃತ ಜಿಂಕೆಯನ್ನು ಸುಟ್ಟು ಹಾಕಲಾಗಿದೆ.