ಹನೂರು: 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ
ಹನೂರು,ಜು.03: ವಿದ್ಯಾವಂತರು ಕೆಲಸ ಹರಸಿ ಹಳ್ಳಿ ಬಿಟ್ಟು ನಗರ, ಪಟ್ಟಣಗಳತ್ತ ಮುಖ ಮಾಡುತ್ತಿರುವುದು ಒಂದಲ್ಲ ಒಂದು ದಿನ ಕೃಷಿಗೆ ಬೀಳುವ ದೊಡ್ಡ ಪೆಟ್ಟಾಗಿರುತ್ತದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ತಿರುಮಲೇಶ್ ಅಭಿಪ್ರಾಯ ಪಟ್ಟರು.
ಲೊಕ್ಕನಹಳ್ಳಿ ಹೋಬಳಿ ಕೇಂದ್ರ ಕೃಷಿ ಇಲಾಖೆ ಆವರಣದಲ್ಲಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕಂದಾಯ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುತ್ತಿರುವ ರೈತ ಬೆಳೆಯಿಂದ ನಷ್ಟ ಅನುಭವಿಸಿದಾಗ ಅಥವಾ ಬೆಂಬಲ ಬೆಲೆ ಸಿಗದಿದ್ದಾಗ ಕೆಲವೊಮ್ಮೆ ನಮ್ಮ ಕಷ್ಟಕ್ಕೆ ಯಾರು ಬರುತ್ತಿಲ್ಲ ಎಂದು ನೊಂದು ಕೊಳ್ಳುವುದಕ್ಕಿಂತ ನಾವು ಎಷ್ಟು ಮಂದಿಗೆ ನೆರವಾಗಿದ್ದೇವೆ ಎಂಬ ಆತ್ಮ ವಿಶ್ವಾಸ ಇಟ್ಟುಕೊಳ್ಳಬೇಕು. ಪ್ರತಿಯೊಬ್ಬ ರೈತರು ಒಂದೇ ರೀತಿ ಫಸಲುನ್ನು ಬೆಳೆಯುವುದರಿಂದ ಮತ್ತು ಮಣ್ಣಿನಾಂಶ ಪರೀಕ್ಷಿಸಿ ಪೋಷಕಾಂಶ ಕೊರತೆಗೆ ಅನುಗುಣವಾಗಿ ಬೇಸಾಯ ಮಾಡದಿರುವುದು ಮತ್ತು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದಿದ್ದಾಗ ರೈತರು ಕೃಷಿಯಲ್ಲಿ ಕಷ್ಟ ನಷ್ಟ ಅನುಭವಿಸುತ್ತಾರೆ. ಪ್ರತಿಯೊಬ್ಬರು ಇರುವಷ್ಟು ಭೂಮಿಯಲ್ಲಿ ಏಳೆಂಟು ವಿವಿಧ ಮಾದರಿ ಬೆಳೆ ಬೆಳೆದರೆ ಒಂದಲ್ಲ ಒಂದು ಫಸಲು ಕೈ ಸೇರುತ್ತದೆ. ಅದರ ಜೊತೆಗೆ ಕುರಿ, ಕೋಳಿ, ಮೇಕೆ, ಹಸು, ತರಕಾಯಿ ಫಲ್ಯಗಳನ್ನು ಬೆಳೆಯುವ ಮೂಲಕ ಆರ್ಥಿಕ ಅಭಿವೃದ್ದಿ ಹೊಂದಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಫೇಲ್ ಆದವರು ಮತ್ತು ಡಬಲ್ ಡಿಗ್ರಿ ಪಡೆದಿರುವಂತ ವಿದ್ಯಾವಂತರು ಹಳ್ಳಿ ಪರಿಸರ ಬಿಟ್ಟು ಪಟ್ಟಣ ಕಡೆಗೆ ಹೋಗುತ್ತಿವುದು ಮುಂದೊಂದು ದಿನ ಕೃಷಿ ವಿನಾಶಕ್ಕೆ ಕಾರಣವಾಗಬಹುದು. ಕಷ್ಟಗಳು ಎಲ್ಲರಲ್ಲೂ ಇರುತ್ತದೆ. ಅದಕ್ಕಾಗಿ ಊರು ಬಿಡುವುದು, ಕೃಷಿ ಬಿಡುವುದು ಬೇಡ. ಪಟ್ಟಣಗಳಲ್ಲಿ ಕೆಲಸ ಮಾಡಿದರೆ ನಿಮ್ಮ ಒಬ್ಬರ ಹೊಟ್ಟೆ ತುಂಬಬಹುದು. ಆದರೆ ಕೃಷಿಯಲ್ಲಿ ಮನಸ್ಸಿಟ್ಟರೆ ದೇಶದ ಪ್ರತಿಯೊಬ್ಬರಿಗೂ ಅನ್ನ ನೀಡಬಹುದು ಎಂಬದನ್ನು ವಿದ್ಯಾವಂತರು ಅರಿತುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಮರುಗದಮಣಿ, ತಾ.ಪಂ. ಅಧ್ಯಕ್ಷ ರಾಜು, ಸದಸ್ಯೆ ಶಿವಮ್ಮ, ಮಹಾದೇವಸ್ವಾಮಿ, ಗ್ರಾ.ಪಂ.ಅಧ್ಯಕ್ಷ ರಂಗಶೆಟ್ಟಿ, ಉಪಾಧ್ಯಕ್ಷೆ ಸುಮತಿ, ಸದಸ್ಯ ಮಲ್ಲಯ್ಯ, ಕಣ್ಣೂರು ಗ್ರಾ.ಪಂ.ಅಧ್ಯಕ್ಷೆ ನಾಗಮ್ಮ, ಕೃಷಿ ನಿರ್ದೆಶಕ ಮಹದೇವು, ತೋಟಗಾರಿ ಇಲಾಖಾಧಿಕಾರಿ ಶಶಿಧರ್, ಡಾ.ಶಿವಪ್ಪ, ಪಂಪನಗೌಡ, ಕೃಷಿ ಅಧಿಕಾರಿಗಳಾದ ದೊರೆರಾಜ್, ಮನೋಹರ್, ಸಿದ್ದಪ್ಪಸ್ವಾಮಿ, ರೈತರು, ಮಹಿಳ ಸಂಘದ ಸದಸ್ಯರು ಹಾಜರಿದ್ದರು.