ತುಮಕೂರು: ಬೈಕ್ ಕಳ್ಳನ ಬಂಧನ; 8 ದ್ವಿಚಕ್ರ ವಾಹನಗಳ ವಶ
ತುಮಕೂರು.ಜು.03: ಸರಕಾರಿ ಕಚೇರಿ, ಜನನಿಬೀಡ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಮಧುಗಿರಿ ಪೊಲೀಸರು, ಬಂಧಿತನಿಂದ ನಾಲ್ಕು ಲಕ್ಷ ರೂ ಬೆಲೆ ಬಾಳುವ 8 ವಿವಿಧ ಕಂಪನಿಗಳ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿರಾ ತಾಲೂಕಿನ ಹುಳಿಗೆರೆ ನಿವಾಸಿ ರಾಮಚಂದ್ರಪ್ಪ ಎಂಬವರು ಜೂನ್ 19 ರಂದು ಮಧುಗಿರಿಯ ಡಿಡಿಪಿಐ ಕಚೇರಿಯಲ್ಲಿ ತಮ್ಮ ಕೆಲಸ ಮುಗಿಸಿ, ವಾಪಸ್ಸು ಬಂದು ನೋಡಿದಾಗ ವಾಹನ ಕಾಣೆಯಾಗಿತ್ತು. ಈ ಸಂಬಂಧ ಮಧುಗಿರಿ ಪೊಲೀಸರಿಗೆ ದೂರು ನೀಡಿದ್ದರು.
ಸದರಿ ಕೇಸಿನ ವಿಚಾರಣೆಗಾಗಿ ಡಿವೈಎಸ್‍ಪಿ ಕಲ್ಲೇಶ್ವಪ್ಪ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡ ಮಾಹಿತಿಗಳನ್ನು ಕಲೆಹಾಕಿ ಆಂಧ್ರಪ್ರದೇಶದ ಮಡಕಶಿರಾ ಜಿಲ್ಲಾ ಗಂಗವಾಯಿ ಪಾಳ್ಯದ 37 ವರ್ಷದ ರಾಜಗೋಪಾಲ ಬಿನ್ ರಂಗಧಾಮಪ್ಪ ಎಂಬ ಆರೋಪಿಯನ್ನು ಬಂಧಿಸಿ, ಆತನಿಂದ ಮಧುಗಿರಿ ಮತ್ತು ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಐದು ವಿವಿಧ ಮೋಟಾರು ವಾಹನ ಕಳ್ಳತನ ಪ್ರಕರಣಗಳಲ್ಲಿ ಕಳುವಾಗಿದ್ದ ಸುಮಾರು 4 ಲಕ್ಷ ರೂ ಬೆಲೆ ಬಾಳುವ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನಗಳ ನೊಂದಣಿ ಸಂಖ್ಯೆಯು, ಕೆ.ಎ.64-ಇ-5503, ಕೆ.ಎ.53-ಗಿ-9082, ಕೆ.ಎ.06-ಇಎ 8549, ಕೆ.ಎ.64-ಜ-0091, ಕೆ.ಎ.40-ಡಬ್ಲ್ಯು-7639, ಕೆ.ಎ.06-ವೈ.7221, ಕೆ.ಎ.06-ಇಎನ್ 3068, ಕೆ.ಎ.06-ಇಕ್ಯೂ 0763 ಆಗಿದ್ದು, ಇವುಗಳ ಒಟ್ಟು ಮೌಲ್ಯ 4 ಲಕ್ಷ ರೂಗಳಾಗಿರುತ್ತದೆ ಎಂದು ತಿಳಿದುಬಂದಿದೆ.
ಪ್ರಕರಣವನ್ನು ಭೇಧಿಸಿದ ಮಧುಗರಿ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ವಿ.ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅಭಿನಂದಿಸಿದ್ದಾರೆ.