ಕೇರಳದ ರಾಜಕೀಯ ಗ್ಯಾಂಗ್‌ವಾರ್‌ಗಳಿಗೆ ಕೊನೆ ಎಂದು?

Update: 2018-07-04 05:05 GMT

ಕೇರಳದ ಕೊಚ್ಚಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು, ಎಸ್‌ಎಫ್‌ಐ ಕಾರ್ಯಕರ್ತನನ್ನು ಇರಿದು ಕೊಲೆಗೈಯಲಾಗಿದೆ. ಅತ್ಯಂತ ಪ್ರಬುದ್ಧ ರಾಜಕೀಯ ಪ್ರಜ್ಞೆಯುಳ್ಳ ರಾಜ್ಯವೆನ್ನುವ ಹಿರಿಮೆ ಕೇರಳದ್ದು. ಇದರ ಜೊತೆಗೇ ರಾಜಕೀಯ ಗ್ಯಾಂಗ್ ವಾರ್‌ಗಳಿಗೂ ಇದೇ ಕೇರಳ ಕುಖ್ಯಾತವಾಗಿದೆ. ಅದರ ಭಾಗವಾಗಿ ಕೇರಳದಲ್ಲಿ ಇನ್ನೊಂದು ಹೆಣ ಬಿದ್ದಿದೆ. ಅದೂ ಕಲಿತು ಮುಂದೆ ದೇಶವನ್ನು ಮುನ್ನಡೆಸುವ ರಾಜಕೀಯ ಶಕ್ತಿಯಾಗಬೇಕಾಗಿದ್ದ ವಿದ್ಯಾರ್ಥಿಯೊಬ್ಬನದ್ದು. ಈ ಕೃತ್ಯವನ್ನು ಯಾರೇ ಎಸಗಿರಲಿ, ಅದಕ್ಕೆ ಕಾರಣ ಏನೇ ಇರಲಿ, ಅತ್ಯಂತ ಖಂಡನೀಯ. ಕೇರಳ ರಾಜ್ಯದ ರಕ್ತಚರಿತ್ರೆಗೆ ಇದು ಇನ್ನೊಂದು ಸೇರ್ಪಡೆ. ಒಂದು ಕೊಲೆಯೊಂದಿಗೆ ಪ್ರಕರಣ ಮುಗಿಯುವುದಿಲ್ಲ ಎನ್ನುವುದು ಕೇರಳದ ರಾಜಕೀಯ ರಕ್ತ ಚರಿತ್ರೆಯ ಅರಿವು ಇರುವವರಿಗೆ ಗೊತ್ತೇ ಇದೆ. ಅದು ಇನ್ನೊಂದು ಕೊಲೆಗೆ ಪೀಠಿಕೆಯಾಗಿದೆ. ಈ ಸರಪಣಿಗೆ ಒಂದು ಸುದೀರ್ಘ ಇತಿಹಾಸವೇ ಇದೆ. ಕೇರಳದ ರಾಜಕೀಯ ಇತಿಹಾಸವನ್ನು ಬಿಡಿಸಿದರೆ, ಅದರ ಬಹುತೇಕ ಪುಟಗಳು ರಕ್ತದಿಂದ ನೆಂದಿವೆ.

ಖಿಲಾಫತ್ ಚಳವಳಿಯ ಸಂದರ್ಭದಲ್ಲಿ ಮಾಪಿಳ್ಳೆಗಳ ಬಂಡಾಯದಿಂದ ಹಿಡಿದು ಕಯ್ಯೂರು ರೈತ ಚಳವಳಿಯವರೆಗೆ ರಕ್ತಸಿಕ್ತ ಹೋರಾಟದ ಬೇರೆ ಬೇರೆ ಹಂತಗಳನ್ನು ನಾವು ಗುರುತಿಸಬಹುದು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಕೇರಳ ಹೇಗೆ ಭಾಗಿಯಾಯಿತೋ ಹಾಗೆಯೇ, ಕೇರಳದ ನೆಲವನ್ನು ಕಚ್ಚಿಕೊಂಡಿದ್ದ ಮೇಲ್ಜಾತಿಯ ವಿಷದ ಹಾವುಗಳ ಜೊತೆಗೂ ಸೆಣಸಿತು. ಹೋರಾಟವನ್ನು ದಮನಿಸಲು ಮೇಲ್ಜಾತಿಗಳು ಬಲವನ್ನು ಬಳಸಿದಾಗ ಅದನ್ನು ಅಷ್ಟೇ ತೀವ್ರವಾಗಿ ಎದುರಿಸುವ ಸಂದರ್ಭದಲ್ಲಿ ರಕ್ತವೂ ಹರಿಯಿತು. ಕೇರಳದ ಜಾತೀಯತೆಯನ್ನು ನೋಡಿ ವಿವೇಕಾನಂದರು ‘ಅದೊಂದು ಹುಚ್ಚರ ಆಸ್ಪತ್ರೆ’ ಎಂದು ಹೇಳಿದ್ದರು. ನಂಬೂದಿರಿಗಳು ಸೇರಿದಂತೆ ವಿವಿಧ ಮೇಲ್ಜಾತಿಯ ಬ್ರಾಹ್ಮಣ ಸಮುದಾಯ ಕೇರಳದ ಜನರನ್ನು ಶೋಷಿಸಿದಷ್ಟು ಬ್ರಿಟಿಷರೂ ಶೋಷಣೆ ಮಾಡಿರಲಾರರು. ದಲಿತ ಹೆಣ್ಣು ಮಕ್ಕಳು ರವಿಕೆ ಹಾಕುವ ಹಕ್ಕಿಗಾಗಿಯೂ ತಮ್ಮ ಪ್ರಾಣವನ್ನು ಕೊಡಬೇಕಾಗಿ ಬಂತು ಎನ್ನುವಾಗ, ಕೇರಳದ ರಾಜಕೀಯ ಕ್ರಾಂತಿಯಲ್ಲಿ ಹಿಂಸೆ ಅದೆಷ್ಟು ಅನಿವಾರ್ಯವಾಗಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ನಾರಾಯಣ ಗುರುಗಳು ಈಳವರಿಗಾಗಿ ಪ್ರತ್ಯೇಕ ದೇವಸ್ಥಾನವನ್ನೇ ಕಟ್ಟುವಂತಹ ಸ್ಥಿತಿ ನಿರ್ಮಾಣವಾಯಿತು. ಇದೇ ಸಂದರ್ಭದಲ್ಲಿ ಮಾಲಿಕ್‌ದೀನಾರ್‌ರಂತಹ ಸಂತರಿಂದಾಗಿ ಕೇರಳದಲ್ಲಿ ಇಸ್ಲಾಂ ಕೂಡ ಜನಪ್ರಿಯವಾಯಿತು.

ಕೇರಳದ ರಾಜಕೀಯ ಇತಿಹಾಸವನ್ನು ಮೂರು ಪ್ರಮುಖ ಚಿಂತನಾಧಾರೆಗಳು ಬದಲಿಸಿದವು. ಒಂದು ನಾರಾಯಣ ಗುರುಗಳ ಚಿಂತನೆಯಾಗಿದ್ದರೆ ಇನ್ನೊಂದು ಕಮ್ಯುನಿಸಂ. ಇದೇ ಸಂದರ್ಭದಲ್ಲಿ ಕೇರಳದ ಶೋಷಿತರು ಇಸ್ಲಾಂ ಧರ್ಮದ ಸಮಾನತೆಗೂ ಆಕರ್ಷಿತರಾದರು. ಪರಿಣಾಮವಾಗಿ ಇಸ್ಲಾಂ ಧರ್ಮ ಕೂಡ ಅಷ್ಟೇ ವೇಗವಾಗಿ ಹರಡಿಕೊಂಡಿತು. ಕೇರಳದ ಜಮೀನ್ದಾರರ ವಿರುದ್ಧ ಪ್ರತಿರೋಧ ತೋರುವಲ್ಲಿ ಈ ಮೂರೂ ಚಿಂತನೆಗಳು ತನ್ನದೇ ಆದ ಪಾತ್ರವನ್ನು ನಿರ್ವಹಿಸಿವೆ. ನಾರಾಯಣ ಗುರುಗಳ ಮೂಲಕ ಹುಟ್ಟಿಕೊಂಡ ತಳಸ್ತರದ ಜನರ ರಾಜಕೀಯ ಹೋರಾಟವನ್ನು ನಿಧಾನಕ್ಕೆ ಕಮ್ಯುನಿಸಂ ಅಪಹರಿಸಿತು. ಕೇರಳದಲ್ಲಿ ಕಮ್ಯುನಿಸಂ ಜೊತೆಗೆ ಮುಸ್ಲಿಮ್ ತರುಣರೂ ಗುರುತಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಇಸ್ಲಾಮ್ ಚಿಂತನೆಯೂ ಕೂಡ ಕೇರಳದಲ್ಲಿ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದೆ. ಕೇರಳದ ಮುಸ್ಲಿಮರ ಸಾಮಾಜಿಕ ಕಾರಣಗಳು ಇದಕ್ಕೆ ಕಾರಣವಾಯಿತು. ಶೋಷಿತ ಸಮುದಾಯ ವಿವಿಧ ಚಿಂತನೆಯಡಿಯಲ್ಲಿ ಒಂದಾದಂತೆ ಜಾತಿ ಶಕ್ತಿಗಳು ಹಿನ್ನಡೆ ಅನುಭವಿಸತೊಡಗಿದವು. ಇಂದು ಕೇರಳದಲ್ಲಿ ಪುರೋಹಿತ ಶಾಹಿ ವ್ಯವಸ್ಥೆ ಬೇರೆ ವೇಷದಲ್ಲಿ ಪ್ರವೇಶ ಮಾಡಿದೆ. ಎಲ್ಲಿಯವರೆಗೆ ಎಂದರೆ, ನಾರಾಯಣ ಗುರುಗಳು ಸ್ಥಾಪಿಸಿದ ಪೀಠವನ್ನೇ ಅದು ಬಲಿ ತೆಗೆದುಕೊಳ್ಳುತ್ತಿದೆ. ಹಿಂಸೆಯಿಲ್ಲದೆ ಹಿಂದುತ್ವ ಚಿಂತನೆಯನ್ನು ಹರಡುವುದು ಸಾಧ್ಯವಿಲ್ಲ. ಆದುದರಿಂದ ಕೇರಳದಲ್ಲಿ ಆರೆಸ್ಸೆಸ್ ಹಿಂಸೆಯನ್ನು ಕೈಯಲ್ಲೂ ಬಾಯಲ್ಲೂ ಬಳಸುತ್ತಾ ಬಂದಿದೆ. ಆರೆಸ್ಸೆಸ್ ದೇಶದ ಬಹುತೇಕ ಕಡೆ ಹಿಂಸೆಯ ಮೂಲಕ ಜನರನ್ನು ಧ್ರುವೀಕರಿಸಲು ಯಶಸ್ವಿಯಾಗಿದ್ದರೂ, ಕೇರಳದಲ್ಲಿ ತೀವ್ರವಾದ ಪ್ರತಿರೋಧವನ್ನು ಎದುರಿಸಿತು.

ದೇಶಾದ್ಯಂತ ಸಂಘಪರಿವಾರ ಏಕಮುಖ ದಾಳಿಯನ್ನಷ್ಟೇ ಮಾಡುತ್ತಾ ಬಂದಿದೆ. ತೀವ್ರವಾದ ಪ್ರತಿದಾಳಿಯನ್ನು ಎದುರಿಸುತ್ತಿಲ್ಲ. ಆದರೆ ಕೇರಳದಲ್ಲಿ ಅಂತಹದೊಂದು ಪ್ರತಿ ದಾಳಿಯನ್ನು ಅದು ಏಕಕಾಲದಲ್ಲಿ ಮುಸ್ಲಿಮರಿಂದಲೂ, ಕಮ್ಯುನಿಸ್ಟರಿಂದಲೂ ಎದುರಿಸುತ್ತಿದೆ. ಪರಿಣಾಮವಾಗಿಯೇ, ಕೇರಳದಲ್ಲಿ ಹಿಂದೂಗಳ ಹತ್ಯಾಕಾಂಡವಾಗುತ್ತಿದೆ ಎಂದು ಕೇಂದ್ರದ ನಾಯಕರು ಕೂಗಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಸಂಘಪರಿವಾರ ನಡೆಸುತ್ತಿರುವ ಹಿಂಸೆಯ ಕುರಿತಂತೆ ವೌನ ತಾಳಿದೆ. ಕೇರಳದಲ್ಲಿ ಮುಸ್ಲಿಮರು ರಾಜಕೀಯವಾಗಿ ಯಶಸ್ವಿಯಾಗಿ ಸಂಘಟಿತವಾಗುತ್ತಿರುವುದು ಆರೆಸ್ಸೆಸ್‌ಗೆ ಮಾತ್ರವಲ್ಲ, ಕಮ್ಯುನಿಸ್ಟರಿಗೂ ಬೇಕಾಗಿಲ್ಲ. ಧರ್ಮದ ಹೆಸರಲ್ಲಿ ಸಂಘಟಿತವಾಗುವ ಪಕ್ಷಗಳು ಕಮ್ಯುನಿಸ್ಟ್ ಪಕ್ಷದೊಳಗಿರುವ ಮುಸ್ಲಿಮ್ ಕಾರ್ಯಕರ್ತರನ್ನು ಮತ್ತು ಮತಗಳನ್ನು ಸೆಳೆಯಬಹುದೆಂಬ ಆತಂಕ ಅದಕ್ಕಿದೆ.

ಆದುದರಿಂದಲೇ ಏಕಕಾಲದಲ್ಲಿ ಕಮ್ಯುನಿಸ್ಟ್-ಆರೆಸ್ಸೆಸ್, ಆರೆಸ್ಸೆಸ್-ಪಿಎಫ್‌ಐ, ಪಿಎಫ್‌ಐ-ಕಮ್ಯುನಿಸ್ಟ್ ನಡುವೆ ತಿಕ್ಕಾಟಗಳು ನಡೆಯುತ್ತಿವೆ. ಇಲ್ಲಿ ನಡೆಯುವ ಹಿಂಸೆಗಳಿಗೆ ಯಾರೋ ಒಬ್ಬರನ್ನು ಹೊಣೆ ಮಾಡುವಂತಿಲ್ಲ. ಆದರೆ ಕಮ್ಯುನಿಸ್ಟರ ಇತಿಹಾಸ ನೋಡಿದರೆ ಅದು ಕೇರಳದ ಶೋಷಿತರ ಪರವಾಗಿ ಪ್ರಾಮಾಣಿಕವಾಗಿ ಹೋರಾಟ ನಡೆಸಿಕೊಂಡು ಬಂದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ, ಆ ಪ್ರಾಮಾಣಿಕತೆಯನ್ನು ಇಂದಿಗೂ ಉಳಿಸಿಕೊಂಡಿದೆಯೇ ಎನ್ನುವುದು ಚರ್ಚೆಗೆ ಅರ್ಹವಾದ ವಿಷಯ. ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರಣಗಳನ್ನು ಬದಿಗಿಟ್ಟು, ಧಾರ್ಮಿಕ ಸಿದ್ಧಾಂತವನ್ನು ಬಳಸಿಕೊಂಡು ರಾಜಕೀಯ ಶಕ್ತಿಯಾಗಲು ಕೆಲವು ಮುಸ್ಲಿಮ್ ಸಂಘಟನೆಗಳೂ ಹೋರಾಟ ನಡೆಸುತ್ತಿವೆ. ಈ ತಿಕ್ಕಾಟಗಳೆಲ್ಲ ಅಂತಿಮವಾಗಿ ಕೇರಳವನ್ನು ರಾಜಕೀಯ ಗ್ಯಾಂಗ್‌ವಾರ್‌ಗಳ ಕಣವಾಗಿ ಮಾರ್ಪಡಿಸಿದೆ.

ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಇರಬೇಕು ನಿಜ. ಆದರೆ ಅದು ಅವರ ಭವಿಷ್ಯ ಮತ್ತು ಸಮಾಜದ ಭವಿಷ್ಯವನ್ನು ಜೊತೆಯಾಗಿ ಬಲಿತೆಗೆದುಕೊಳ್ಳುವಂತಾಗಬಾರದು. ಮುಸ್ಲಿಮರು ಕೂಡ ಶೋಷಿತ ಸಮುದಾಯದ ಒಂದು ಪ್ರಮುಖ ಭಾಗ. ಅವರು ಜಾಗೃತರಾಗುವುದು, ತಮ್ಮ ಏಳಿಗೆ, ಅಭಿವೃದ್ಧಿಯ ಕುರಿತಂತೆ ಚಿಂತಿಸುವುದು, ತಮ್ಮ ಮೇಲೆ ನಡೆಯುವ ದಾಳಿಯ ವಿರುದ್ಧ ಒಂದಾಗುವುದು ಅತ್ಯಗತ್ಯ. ಆದರೆ ಹಿಂಸೆಯ ತಳಹದಿಯಲ್ಲಿ ಒಂದು ಸಂಘಟನೆಯನ್ನು ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ. ಆ ಹಿಂಸೆಯೇ ಅಂತಿಮವಾಗಿ ಸಂಘಟನೆಯನ್ನು ಬಲಿ ತೆಗೆದುಕೊಳ್ಳುತ್ತದೆ. ಸಾಮಾಜಿಕ ಜಾಗೃತಿಯನ್ನು ಗುರಿಯಾಗಿಟ್ಟು ಮುಸ್ಲಿಮ್ ಸಮುದಾಯಗಳು ಒಂದಾಗಬೇಕೇ ಹೊರತು, ಅವರು ಒಂದಾಗುವುದಕ್ಕೆ ಧರ್ಮಾಂಧತೆ ಕಾರಣವಾಗಬಾರದು.

ಅಂತಹ ಸಂಘಟನೆಯಿಂದ ಸಮಾಜಕ್ಕೆ ಪ್ರಯೋಜನವಾಗುವುದಕ್ಕಿಂತ ನಷ್ಟವೇ ಹೆಚ್ಚು. ಈ ನಿಟ್ಟಿನಲ್ಲಿ ಕನಿಷ್ಠ ಕಮ್ಯುನಿಸ್ಟ್ ಮತ್ತು ಮುಸ್ಲಿಮ್ ಸಂಘಟನೆಗಳ ನಡುವೆ ಒಂದು ಸಮನ್ವಯತೆ ಸೃಷ್ಟಿಯಾಗಬೇಕಾಗಿದೆ. ಕೇರಳವನ್ನು ಮತ್ತೆ ಬಲಿತೆಗೆದುಕೊಳ್ಳಲು ಸಂಘಪರಿವಾರ ಹೊಂಚುಹಾಕಿ ಕೂತಿರುವ ಈ ಹೊತ್ತಿನಲ್ಲಿ ಎಲ್ಲ ಸಮುದಾಯದ ಜಾತ್ಯತೀತ ಮನಸ್ಸುಗಳು ತಮ್ಮ ಸಣ್ಣ ಪುಟ್ಟ ಅಭಿಪ್ರಾಯಭೇದಗಳನ್ನು ಮರೆತು ಮತಾಂಧ ಶಕ್ತಿಗಳನ್ನು ಎದುರಿಸಬೇಕು. ಅಂತಹ ಮತಾಂಧತೆ ಹಿಂದೂಗಳಲ್ಲಿರಲಿ, ಮುಸ್ಲಿಮರಲ್ಲಿರಲಿ, ಅವರಿಂದ ಅಂತರ ಕಾಯುವುದು ಕೇರಳದ ಸಾಮಾಜಿಕ ರಾಜಕೀಯ ಹಿತದೃಷ್ಟಿಯಿಂದ ಅತ್ಯಗತ್ಯ. ನಾರಾಯಣಗುರುಗಳಂತಹ ಧೀಮಂತರ ಚಿಂತನೆಗಳನ್ನು ಮತ್ತೆ ಕೇರಳದಲ್ಲಿ ಜಾಗೃತಿಗೊಳಿಸುವ ಮೂಲಕ, ಸಂಘಪರಿವಾರದ ಸಂಚುಗಳನ್ನು ವಿಫಲಗೊಳಿಸಬೇಕು. ಹೆಣಗಳಿಗೆ ಪ್ರತಿಯಾಗಿ ಹೆಣಗಳನ್ನು ಉರುಳಿಸುತ್ತಾ ಹೋಗುವುದರಿಂದ ಯಾರ ರಾಜಕೀಯ ಸಾಧನೆಗಳೂ ಆಗಲಾರದು. ಇದನ್ನು ಕೇರಳದ ರಾಜಕೀಯ ಪಕ್ಷಗಳ ಮುಖಂಡರು ಇನ್ನಾದರೂ ಅರ್ಥ ಮಾಡಿಕೊಂಡು ತಮ್ಮ ತಮ್ಮ ಕಾರ್ಯಕರ್ತರನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News