×
Ad

ಶೃಂಗೇರಿ ದೇವಾಲಯಕ್ಕೆ ಕುಟುಂಬಸ್ಥರ ಜೊತೆ ಭೇಟಿ ನೀಡಿದ ನೂತನ ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್

Update: 2018-07-04 17:54 IST

ಚಿಕ್ಕಮಗಳೂರು, ಜು.4: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ದಿನೇಶ್ ಗುಂಡೂರಾವ್ ಬುಧವಾರ ಬೆಳಗ್ಗೆ ಶೃಂಗೇರಿ ಶಾರದಾಂಬೆ ದೇವಾಲಯ ಹಾಗೂ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಗುಂಡೂರಾವ್ ತಮ್ಮ ಪತ್ನಿ ಟಬು ರಾವ್, ಮಕ್ಕಳಾದ ಅನನ್ಯಾ ರಾವ್, ಅಮಿರಾ ರಾವ್ ಹಾಗೂ ಕೆಪಿಸಿಸಿ ರಾಜ್ಯ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ನಿರಂತರ ಗಣೇಶ್ ಅವರೊಂದಿಗೆ ಬುಧವಾರ ಬೆಳಗ್ಗೆ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

ದಿನೇಶ್ ಗುಂಡೂರಾವ್ ಅವರ ಪತ್ನಿ ಟಬುರಾವ್ ಅವರ ಹುಟ್ಟು ಹಬ್ಬ ಬುಧವಾರವೇ ಆಗಿದ್ದು, ಇದೇ ದಿನದಂದು ಅವರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವುದು ವಿಶೇಷವಾಗಿದ್ದು, ಈ ಹಿನ್ನೆಲೆಯಲ್ಲಿ ದಿನೇಶ್ ಕುಟುಂಬದವರು ಶಾರದಾಂಬೆಯ ಸನ್ನಿಧಿಯಲ್ಲಿ ಟಬುರಾವ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಹಾಗೂ ಪೂಜೆಯ ಬಳಿಕ ದಿನೇಶ್ ಗುಂಡೂರಾವ್, ಪತ್ನಿ ಟಬು ಹಾಗೂ ಇಬ್ಬರು ಮಕ್ಕಳು ಶೃಂಗೇರಿ ಮಠದಲ್ಲಿ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಜಗದ್ಗುರುಗಳೊಂದಿಗೆ ದಿನೇಶ್ ಗುಂಡೂರಾವ್ ಕೆಲ ಹೊತ್ತು ಮಾತುಕತೆ ನಡೆಸಿದರು. 

ಗುಂಡೂರಾವ್ ಭೇಟಿ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ನೆರೆದಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಕಾಂಗ್ರೆಸ್ ಮುಖಂಡರು ನೂತನ ಕೆಪಿಸಿಸಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು. ಶೃಂಗೇರಿ ಭೇಟಿ ನಂತರ ಅವರು ಚಿಕ್ಕಮಗಳೂರು ನಗರ ಸಮೀಪದ ಸೆರಾಯ್ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News