ಚಿಕ್ಕಮಗಳೂರು: ಎಂ.ಜಿ.ರಸ್ತೆ-ಅಂಬೇಡ್ಕರ್ ರಸ್ತೆ ಕಾಮಗಾರಿ ಕಳಪೆ; ಆರೋಪ

Update: 2018-07-04 12:29 GMT

ಚಿಕ್ಕಮಗಳೂರು, ಜು.4: 'ನಗರದ ಎಂ.ಜಿ.ರಸ್ತೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಕಳಪೆ ಕಾಮಗಾರಿ ನಡೆದಿರುವುದು ಲೋಕಾಯುಕ್ತ ತನಿಖಾ ತಂಡದಿಂದ ಬಹಿರಂಗವಾಗಿದೆ. ಹಾಗಾಗಿ ಗುತ್ತಿಗೆದಾರನಿಂದ ಹಣ ಹಿಂಪಡೆದು ನೂತನ ರಸ್ತೆ ನಿರ್ಮಾಣ ಮಾಡಬೇಕು ಎಂದು ದೂರುದಾರರಾದ ಝಮೀಲ್ ಅಹ್ಮದ್ ಮತ್ತು ಪತ್ರಕರ್ತ ಜಿ.ಎಂ.ರಾಜಶೇಖರ್ ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1,302 ಮೀ. ಉದ್ದದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ 30 ಸೆ.ಮೀ. ದಪ್ಪ ಹೊಂದಿರಬೇಕಿತ್ತು. 9 ಜಾಗದಲ್ಲಿ ಯಂತ್ರದಿಂದ ಕೊರೆಸಿ ಪರಿಶೀಲನೆ ನಡೆಸಿದಾಗ 22-24 ಸೆ.ಮೀ ದಪ್ಪ ಮಾತ್ರವಿದೆ. 1,302 ಮೀಟರ್ ರಸ್ತೆ ನಿರ್ಮಾಣದಲ್ಲಿ 638 ಮೀಟರ್ ರಸ್ತೆ ಕಳಪೆಯಿಂದ ಕೂಡಿದೆ ಎಂಬುದು ತಿಳಿದು ಬಂದಿದೆ. ಚರಂಡಿ ನಿರ್ಮಾಣದಲ್ಲಿಯೂ ಕಳಪೆ ಕಾಮಗಾರಿ ನಡೆದಿದೆ. 10ಕೋಟಿ 36 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂಕ್ರಿಟ್ ರಸ್ತೆಗೆ ಈಗಾಗಲೇ 8 ಕೋಟಿ 96ಲಕ್ಷ ರೂ. ಗುತ್ತಿಗೆದಾರನಿಗೆ ನೀಡಲಾಗಿದೆ ಎಂದರು.

1,093 ಮೀ. ಎಂ.ಜಿ.ರಸ್ತೆ ನಿರ್ಮಾಣದಲ್ಲಿ 465 ಮೀ. ಕಳಪೆ ಕಾಮಗಾರಿಯಾಗಿದೆ. ಸಿಮೆಂಟ್ ಕಿತ್ತು ಹೋಗಿದ್ದು, ಅಲ್ಲಲ್ಲಿ ಬಿರುಕು ಬಂದಿದೆ. ರಸ್ತೆಯ ದಪ್ಪವನ್ನು ಯಂತ್ರದಿಂದ 7 ಕಡೆ ಪರಿಶೀಲನೆ ನಡೆಸಿದ್ದು, 6 ಕಡೆ ರಸ್ತೆಯ ದಪ್ಪದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹಾಗೂ ರಸ್ತೆಗೆ ಬಳಸಿರುವ ಸಿಮೆಂಟ್ ಕೂಡ ಕಳಪೆಯಿಂದ ಕೂಡಿರುವುದು ಕಂಡು ಬಂದಿದ್ದು, ಇದರ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 9.47 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಎಂ.ಜಿ. ರಸ್ತೆಗೆ ಈಗಾಗಲೇ 6.77 ಕೋಟಿ ರೂ. ಅನ್ನು ಗುತ್ತಿಗೆದಾರನಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಎಂ.ಜಿ. ರಸ್ತೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಕಳಪೆ ಕಾಮಗಾರಿಯಾಗಿರುವುದು ಲೋಕಾಯುಕ್ತ ತನಿಖಾ ತಂಡದಿಂದ ತಿಳಿದು ಬಂದಿದ್ದು, ಈಗಾಗಲೇ ಗುತ್ತಿಗೆದಾರನಿಗೆ ಒಟ್ಟು 15 ಕೋಟಿ ರೂ. ಬಿಲ್ ಮಾಡಲಾಗಿದೆ. ಇದರಲ್ಲಿ ಸುಮಾರು 4 ರಿಂದ 5 ಕೋಟಿ ರೂ. ಕಳಪೆ ಕಾಮಗಾರಿಯಾಗಿದೆ. 4ಕೋಟಿ ರೂ. ಗುತ್ತಿಗೆದಾರನಿಗೆ ಸಂದಾಯವಾಗಬೇಕಿದ್ದು, ಕಳಪೆ ಕಾಮಗಾರಿ ನಡೆಸಿರುವುದರಿಂದ 4 ಕೋಟಿ ರೂ. ಹಣ ಮಂಜೂರು ಮಾಡದಂತೆ ಲೋಕಾಯುಕ್ತಕ್ಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದ ಅವರು, ಎಂ.ಜಿ.ರಸ್ತೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ನಿರ್ಮಾಣದಲ್ಲಿ ಕಳಪೆಯಾಗಿರುವುದು ಕಂಡು ಬಂದಿದ್ದು, ಗುತ್ತಿಗೆದಾರನಿಗೆ ಸಂದಾಯವಾಗಿರುವ ಹಣವನ್ನು ವಸೂಲಿ ಮಾಡಿ ನೂತನ ರಸ್ತೆ ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಎಂ.ಜಿ.ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕಾಂಕ್ರಿಟ್ ರಸ್ತೆಯಲ್ಲಿ ಜೆಲ್ಲಿ ಎದ್ದು ಬರುತ್ತಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ, ತನಿಖಾ ತಂಡದಿಂದ ಕಳಪೆ ಕಾಮಗಾರಿಯಾಗಿರುವುದು ದೃಢಪಟ್ಟಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಗುತ್ತಿಗೆದಾರನಿಂದ ಹಣ ವಾಪಾಸ್ ಪಡೆದು ಹೊಸ ರಸ್ತೆ ನಿರ್ಮಾಣ ಮಾಡಬೇಕು.
-ಝಮೀಲ್ ಅಹ್ಮದ್, ದೂರುದಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News