ಮೈತ್ರಿ ಸರಕಾರದ ಬಜೆಟ್ ಮಂಡನೆಗೆ ಕ್ಷಣಗಣನೆ
ಬೆಂಗಳೂರು, ಜು. 4: ರಾಜ್ಯದ ಜನತೆಯ ಬಹುನಿರೀಕ್ಷೆಯ ರೈತರ ಸಾಲಮನ್ನಾ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಗರ್ಭಿಣಿಯರಿಗೆ ಮಾಸಾಶನ, ವಿಧವೆಯರ ಮಾಸಾಶನ ಹೆಚ್ಚಳ ಸೇರಿದಂತೆ ಮೈತ್ರಿ ಸರಕಾರದ ಮುಂದಿನ ನಡೆಯ ಮಹತ್ವ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.
ನಾಳೆ ಮಧ್ಯಾಹ್ನ 11:30ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿಸಲಿದ್ದು, ಜನಸಾಮಾನ್ಯರು ಹಾಗೂ ರೈತರ ಬೆರಗುಗಣ್ಣಿನಿಂದ ಎದುರುನೋಡುತ್ತಿರುವ ರೈತರ ಸಾಲಮನ್ನಾ, ಭವಿಷ್ಯದ ಆರ್ಥಿಕ ಸ್ಥಿತಿಗೆ ಕೈಗನ್ನಡಿ ಹಿಡಿಯುವ ಚೊಚ್ಚಲ ಬಜೆಟ್ ಕುತೂಹಲ ಸೃಷ್ಟಿಸಿದೆ.
ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ರೈತರ 53 ಸಾವಿರ ಕೋಟಿ ರೂ.ಸಾಲಮನ್ನಾದ ಮಾನದಂಡಗಳೇನು ಎಂದು ನಾಳಿನ ಬಜೆಟ್‌ನಲ್ಲಿ ಕುಮಾರಸ್ವಾಮಿ ಪ್ರಕಟಿಸುವ ಸಾಧ್ಯತೆಗಳಿವೆ. ಜೊತೆಗೆ ಮೈತ್ರಿಕೂಟ ಸರಕಾರದ ಭವಿಷ್ಯ ನಡೆ, ಜನಪರ ಯೋಜನೆಗಳ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಮೈತ್ರಿ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ(ಸಿಎಂಪಿ) ಪ್ರಕಟಿಸಲಿದ್ದು, ಸಿದ್ದರಾಮಯ್ಯ ನೇತೃತ್ವದ ಸರಕಾರದ ಜನಪರ ಯೋಜನೆಗಳ ಮುಂದುವರಿಕೆ ಹಾಗೂ ಅವುಗಳಿಗೆ ಎಷ್ಟರ ಮಟ್ಟಿಗೆ ಅನುದಾನ ಒದಗಿಸಲಿದ್ದಾರೆಂಬುದು ಬಜೆಟ್‌ನಲ್ಲಿ ಬಹಿರಂಗಗೊಳ್ಳಲಿದೆ.
ಮುಂದಿನ ಐದು ವರ್ಷಗಳಲ್ಲಿ ನೀರಾವರಿಗೆ 1.25ಲಕ್ಷ ಕೋಟಿ ರೂ.ಅನುದಾನ, ಬಾಕಿ ಇರುವ ನೀರಾವರಿ ಯೋಜನೆಗಳ ಪೂರ್ಣ, ಇಸ್ರೇಲ್ ಮಾದರಿ ಯೋಜನೆ ಜಾರಿ, ಬಡವರಿಗೆ ವಸತಿ ಯೋಜನೆ, ಉದ್ಯೋಗ ಆಧರಿತ ಕೌಶಲ್ಯ ತರಬೇತಿ ಯೋಜನೆ ಸೇರಿ 1 ಕೋಟಿ ಉದ್ಯೋಗ ಸೃಷ್ಟಿ ಹೇಗೆ ಎಂಬ ಸ್ಪಷ್ಟ ಚಿತ್ರಣ ಬಜೆಟ್‌ನಲ್ಲಿ ಬೆಳಕಿಗೆ ಬರಲಿದೆ. ಬಿಪಿಎಲ್-ಎಪಿಎಲ್ ಎಂಬ ತಾರತಮ್ಯವಿಲ್ಲದೆ ಎಲ್ಲ ವರ್ಗದ ಜನರಿಗೆ ಆರೋಗ್ಯ ಸೇವೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ’ ಯೋಜನೆ ಮುಂದುವರಿಕೆ, ಶಿಕ್ಷಣ, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣ, ಕೈಗಾರಿಕೆ ಬೆಳವಣಿಗೆ ಸೇರಿ ಯಾವ್ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಲಿದ್ದಾರೆಂಬುದು ನಿರೀಕ್ಷೆ ಹುಟ್ಟುಹಾಕಿದೆ.
ದೇಶದಲ್ಲೆ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಸರಕಾರದ ಮುನ್ನೋಟವೇನು ಹಾಗೂ ನಗರ-ಗ್ರಾಮೀಣ ಪ್ರದೇಶ ನಡುವಿನ ಅಂತರ ಕಡಿಮೆ ಮಾಡಿ, ಸಮಗ್ರ ಅಭಿವೃದ್ಧಿಗೆ ಕುಮಾರಸ್ವಾಮಿ ಕೈಗೊಳ್ಳುವ ಕ್ರಮಗಳೇನೆಂಬುದಕ್ಕೆ ಉತ್ತರ ದೊರೆಯುವ ನಿರೀಕ್ಷೆ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಬಜೆಟ್‌ನತ್ತ ನೆಟ್ಟಿದೆ.