ಹೆಚ್ಚುವರಿ ಶುಲ್ಕ ಕೇಳಿ ಯಾತ್ರಿಗಳಿಗೆ ಎಸ್‌ಎಂಎಸ್ ಕಳಿಸಿದ ಹಜ್ ಸಮಿತಿ !

Update: 2018-07-04 14:53 GMT

ಬೆಂಗಳೂರು, ಜು.4: ಪ್ರಸಕ್ತ ಸಾಲಿನ ಪವಿತ್ರ ಹಜ್‌ ಯಾತ್ರೆ ಕೈಗೊಳ್ಳುತ್ತಿರುವ ರಾಜ್ಯದ ಯಾತ್ರಿಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಭಾರತೀಯ ಹಜ್ ಸಮಿತಿ ರವಾನಿಸಿರುವ ಎಸ್‌ಎಂಎಸ್ ಸಂದೇಶವು ಯಾತ್ರಿಗಳಲ್ಲಿ ಗೊಂದಲ ಸೃಷ್ಟಿಸಿದೆ.

ಭಾರತೀಯ ಹಜ್ ಸಮಿತಿ ಹೊರಡಿಸಿರುವ ಸುತ್ತೋಲೆ ಪ್ರಕಾರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಕೈಗೊಳ್ಳುವ ಯಾತ್ರಿಗಳು ಹಜ್ ಕರ್ಮವನ್ನು ನಿರ್ವಹಿಸಿ ಪುನಃ ಮಂಗಳೂರಿಗೆ ಹಿಂದಿರುಗಲು ಗ್ರೀನ್ ಕೆಟಗರಿಯವರಿಗೆ 2,63,450 ರೂ.ಗಳನ್ನು ನಿಗದಿ ಪಡಿಸಲಾಗಿತ್ತು. ಇದರ ಮೊದಲ ಕಂತು 81 ಸಾವಿರ ರೂ.ಗಳನ್ನು ಪ್ರಸಕ್ತ ಸಾಲಿನ ಜನವರಿಯಲ್ಲಿ ಪಾವತಿಸಲು ತಿಳಿಸಲಾಗಿತ್ತು. ಎರಡನೆ ಕಂತನ್ನು 1,82,450 ರೂ.ಗಳನ್ನು ಮೇ ತಿಂಗಳ ಒಳಗಡೆ ಪಾವತಿಸಲು ಸೂಚಿಸಲಾಗಿತ್ತು. ಆದರೆ, ಈಗ ದಿಢೀರನೆ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಜುಲೈ 10 ರೊಳಗೆ 16,258 ರೂ.ಗಳನ್ನು ಪಾವತಿಸುವಂತೆ ತಿಳಿಸಿರುವುದು ಯಾತ್ರಿಗಳಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಹಿಂದೆ ನಿಗದಿಪಡಿಸಿದಂತೆ ಬೆಂಗಳೂರು ವಿಮಾನ ನಿಲ್ದಾಣದಿಂದ ತೆರಳುವ ಯಾತ್ರಿಗಳು ಗ್ರೀನ್ ಕೆಟಗರಿಗೆ 2,61,250 ರೂ., ಅಝೀಝಿಯಾ ಕೆಟಗರಿಯ ಯಾತ್ರಿಗಳು 2,27,100 ರೂ.ಗಳು. ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಗ್ರೀನ್ ಕೆಟಗರಿಯ ಯಾತ್ರಿಗಳು 2,63,450 ರೂ., ಅಝೀಝಿಯಾ ಕೆಟಗರಿಯ ಯಾತ್ರಿಗಳು 2,29,250 ರೂ.ಗಳನ್ನು ಪಾವತಿಸಬೇಕಿತ್ತು.

ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಡುವ ಗ್ರೀನ್ ಕೆಟಗರಿಯ ಯಾತ್ರಿಗಳು 2,47,750 ರೂ., ಅಝೀಝಿಯಾ ಕೆಟಗರಿಯ ಯಾತ್ರಿಗಳು 2,13,600 ರೂ. ಹಾಗೂ ಗೋವಾ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಗ್ರೀನ್ ಕೆಟಗರಿಯ ಯಾತ್ರಿಗಳು 2,63,100 ರೂ., ಅಝೀಝಿಯಾ ಕೆಟಗರಿಯ ಯಾತ್ರಿಗಳು 2,28,950 ರೂ.ಗಳನ್ನು ಪಾವತಿಸಬೇಕಿತ್ತು.

ಈ ಸಂಬಂಧ ರಾಜ್ಯ ಸದ್ಭಾವನಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ‘ವಾರ್ತಾ ಭಾರತಿ’ಯೊಂದಿಗೆ ಮಾತನಾಡಿ, ಜು.21 ರಿಂದ 23ರ ವರೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಯಾತ್ರಿಗಳು ಹಜ್‌ ಯಾತ್ರೆಗೆ ಪ್ರಯಾಣ ಬೆಳೆಸುವ ತಯಾರಿಯಲ್ಲಿರುವಾಗ 16,258 ರೂ.ಗಳನ್ನು ಪಾವತಿಸುವಂತೆ ಸಂದೇಶ ಕಳುಹಿಸಿರುವುದು ಯಾತ್ರಿಗಳಿಗೆ ದೊಡ್ಡ ಆಘಾತ ತಂದಿದೆ ಎಂದು ತಿಳಿಸಿದರು.

ಭಾರತೀಯ ಹಜ್ ಸಮಿತಿಯಿಂದ ಸ್ಪಷ್ಟೀಕರಣ ಕೇಳಿದ್ದೇವೆ

ಭಾರತೀಯ ಹಜ್ ಸಮಿತಿಯಿಂದ ರಾಜ್ಯದ ಯಾತ್ರಿಗಳಿಗೆ ಹೆಚ್ಚುವರಿಯಾಗಿ ಹಣ ಪಾವತಿಸುವಂತೆ ಎಸ್‌ಎಂಎಸ್ ಸಂದೇಶ ಬಂದಿರುವ ಕುರಿತು ನಮಗೂ ದೂರುಗಳು ಬಂದಿವೆ. ಈ ಬಗ್ಗೆ ಭಾರತೀಯ ಹಜ್ ಸಮಿತಿಯಿಂದ ಸ್ಪಷ್ಟೀಕರಣ ಕೇಳಿದ್ದು, ನಾಳೆಯೊಳಗೆ ನಮಗೆ ವಿವರಣೆ ಸಿಗಲಿದೆ. ಆನಂತರ, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಸರ್ಫರಾಝ್‌ ಖಾನ್, ಕಾರ್ಯನಿರ್ವಾಹಕ ಅಧಿಕಾರಿ, ರಾಜ್ಯ ಹಜ್ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News