ಕಾವೇರಿ ನೀರು ಹಂಚಿಕೆಗೆ ವಿರೋಧ: ಜು.7 ರಂದು ಕರಾಳದಿನ ಆಚರಣೆ

Update: 2018-07-04 15:09 GMT

ಬೆಂಗಳೂರು, ಜು.4: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡು ಪರವಾಗಿ ಕಾರ್ಯ ನಿರ್ವಹಿಸುತ್ತಿರುವುದರ ವಿರುದ್ಧ ಜು.7ರಂದು ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ‘ಕರಾಳದಿನ’ ಆಚರಿಸಲಾಗುವುದೆಂದು ಕನ್ನಡಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳು ನಾಡಿಗೆ 30 ಟಿಎಂಸಿ ನೀರು ಬಿಡಬೇಕೆಂದು ತೀರ್ಮಾನಿಸುವ ಮೂಲಕ ರಾಜ್ಯಕ್ಕೆ ಅನ್ಯಾಯವೆಸಗುತ್ತಿದೆ. ಹೀಗಾಗಿ, ಜು.7ರಂದು ಬೆಳಗ್ಗೆ 10ಗಂಟೆಗೆ ಕರಾಳದಿನ ಆಚರಿಸಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಭೂತದಹನ ಮಾಡಲಾಗುವುದು ಎಂದು ಹೇಳಿದರು.

ಕಾವೇರಿ ವದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಪದೇಪದೇ ಅನ್ಯಾಯವಾಗುತ್ತಿದ್ದರೂ ಸಹ ಯಾರೂ ಧ್ವನಿ ಎತ್ತಲು ಮುಂದಾಗುವುದಿಲ್ಲ. ಜನತೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ವೌನವಹಿಸಿರುವುದೇಕೆ ಎಂದು ಪ್ರಶ್ನಿಸಿದ ಅವರು, ಪರಿಸ್ಥಿತಿ ಹೀಗೆ ಮುಂದುವರೆದರೆ ನೀರಿಗಾಗಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜನತೆಗೆ ಎಚ್ಚರಿಸಿದರು.

ಶಾಸನ ಸಭೆಯಲ್ಲಿ ರಾಜ್ಯಪಾಲರು ಭಾಷಣ ಮಾಡುವ ವೇಳೆ ಯಾವೊಬ್ಬ ಶಾಸಕ, ಮಂತ್ರಿಗಳು ಚಕಾರವೆತ್ತಿಲ್ಲ. ಅಲ್ಲದೇ, ಕಾವೇರಿ ನಿರ್ವಹಣಾ ಪ್ರಾಧಿಕಾರದ ನಿರ್ಣಯವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಸ್ವಾಗತಿಸಿರುವುದು ಖಂಡನೀಯ ಎಂದರು.

ಕರ್ನಾಟಕದ ಲೋಕಸಭೆ ಸದಸ್ಯರು, ಮಂತ್ರಿಗಳ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ಇವರಿಗೆ ರಾಜ್ಯದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದ ಅವರು, ರಾಜ್ಯದ ಬಗ್ಗೆ ಬಿಜೆಪಿಯವರಿಗೆ ನಿಜವಾದ ಕಾಳಜಿ ಇದ್ದರೆ, ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಸಮಸ್ಯೆ ಬಗೆಹರಿಸಲಿ ಎಂದು ಸವಾಲು ಹಾಕಿದರು.

ಅಂದಿನ ಹೋರಾಟದಲ್ಲಿ ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ, ಮಂಜುನಾಥ್ ದೇವ್ ಸೇರಿ 2 ಸಾವಿರಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ವಾಟಾಳ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News