×
Ad

ಮೈಸೂರು: ಅನುದಾನಿತ ಶಾಲೆಗಳ ವೇತನ ತಡೆ ಖಂಡಿಸಿ ಏಕಾಂಗಿ ಪ್ರತಿಭಟನೆ

Update: 2018-07-04 22:42 IST

ಮೈಸೂರು,ಜು.4: ಅನುದಾನಿತ ಶಾಲೆಗಳ ವೇತನ ತಡೆಹಿಡಿದಿರುವ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನಿಂದ ವಿಧಾನ ಪರಿಷತ್ ಗೆ ಸ್ಪರ್ಧಿಸಿ ಪರಾಜಿತಗೊಂಡಿರುವ ಎಂ.ಲಕ್ಷ್ಮಣ್ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ನಗರದ ಡಿಡಿಪಿಐ ಕಚೇರಿ ಆವರಣದಲ್ಲಿ ಬುಧವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ನಂತರ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದೇನೆ. ಅನುದಾನಿತ ಖಾಸಗಿ ಪ್ರೌಢಶಾಲೆಗಳಲ್ಲಿ, ಕಳೆದ ಐದು ವರ್ಷಗಳ ಎಸೆಸೆಲ್ಸಿ ಫಲಿತಾಂಶವು ಜಿಲ್ಲೆಯ ಸರಾಸರಿ ಫಲಿತಾಂಶಕ್ಕಿಂತ ಕಡಿಮೆ ಇರುವ ಶಾಲೆಗಳ ವೇತನಾನುದಾನವನ್ನು ತಡೆ ಹಿಡಿಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನಿರ್ದೇಶನದ ಮೇರೆಗೆ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದೆ. ಈ ಆದೇಶದ ಮೇರೆಗೆ ರಾಜ್ಯಾದ್ಯಂತ ಬಿಇಓ ಕಚೇರಿಗಳಲ್ಲಿ ಶಿಕ್ಷಕರುಗಳ ಸಂಬಳದ ಬಿಲ್ಲನ್ನು ತಡೆಹಿಡಿಯಲಾಗಿದೆ. ಸಂಬಳವನ್ನೇ ನಂಬಿ ಜೀವನ ನಡೆಸುತ್ತಿರುವ ಶಿಕ್ಷಕರುಗಳು ಆತಂಕದಿಂದ ಶಾಲೆಗಳಿಗೆ ಬಂದು ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಇಲಾಖೆ ಮುಂದಾಗಬೇಕು.

ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರುಗಳು ಕೊರತೆಯನ್ನು ತುಂಬಬೇಕು. ಎಂಟು ವರ್ಷಗಳಲ್ಲಿ ಏನೂ ಕಲಿಯದಿದ್ದರೂ ಮಗುವನ್ನು ಪಾಸ್ ಮಾಡಬೇಕೆಂಬ ನಿಯಮವಿರುವುದರಿಂದ ಏನೂ ಗೊತ್ತಿಲ್ಲದ ಮಕ್ಕಳು ಪ್ರೌಢಶಾಲೆಗೆ ಬರುತ್ತಾರೆ. ಉಳಿದ ಎರಡು ವರ್ಷಗಳಲ್ಲಿ ಅವರಿಗೆ ಎಲ್ಲವನ್ನೂ ಕಲಿಸಿ ಎಸೆಸೆಲ್ಸಿ ಪರೀಕ್ಷೆಗೆ ಕೂರಿಸಬೇಕಾದ ಪರಿಸ್ಥಿತಿಯಿದೆ. ಎಸೆಸೆಲ್ಸಿಯಲ್ಲಿ ನಿಗದಿತ ಫಲಿತಾಂಶ ಪಡೆಯದಿರುವ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆಯಂತಹ ಪುನಶ್ಚೇತನ ಕಾರ್ಯಾಗಾರವನ್ನು ಏರ್ಪಡಿಸಿ. ವಿದ್ಯಾರ್ಥಿಗಳು ಅನುತ್ತೀರ್ಣರಾದ ವಿಷಯವಾರು ಶಿಕ್ಷಕರಿಗೆ ಸೂಕ್ತ ಕಾರ್ಯಾಗಾರವನ್ನು ಏರ್ಪಡಿಸುವ ಮೂಲಕ ಪರಿಹಾರ ಸಾಧ್ಯತೆಗಳ ಕುರಿತು ಕ್ರಮ ವಹಿಸಲು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News