×
Ad

ಶಿವಮೊಗ್ಗ: ಇಬ್ಬರು ಆರೋಪಿಗಳ ಗಡಿಪಾರಿಗೆ ಉಪ ವಿಭಾಗಾಧಿಕಾರಿ ಆದೇಶ

Update: 2018-07-04 23:13 IST

ಶಿವಮೊಗ್ಗ, ಜು. 4: ನಾನಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಶಿವಮೊಗ್ಗ ಹಾಗೂ ಭದ್ರಾವತಿಯ ಇಬ್ಬರು ಆಪಾದಿತರನ್ನು ಜಿಲ್ಲೆಯಿಂದ 1 ವರ್ಷದ ಅವಧಿಗೆ ಗಡಿಪಾರುಗೊಳಿಸಿ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 

ಕೊಲೆ, ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಿವಮೊಗ್ಗ ಟಿಪ್ಪುನಗರ ಎಡಭಾಗದ 2 ನೇ ಕ್ರಾಸ್‍ನಲ್ಲಿ ವಾಸವಾಗಿರುವ ಮುಹಮ್ಮದ್ ಖುರಂ ಪಾಷಾ ಯಾನೆ ಮೋಟು ಹಾಗೂ ಕೊಲೆ ಯತ್ನ, ಕಳವು, ಹಲ್ಲೆ, ಗಾಂಜಾ ಪೂರೈಕೆಯಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಭದ್ರಾವತಿ ಪಟ್ಟಣದ ಕೂಲಿ ಬ್ಲಾಕ್ ಶೆಡ್ ಸಮೀಪದ ಮಾರಿಯಮ್ಮ ದೇವಾಲಯ 2 ನೇ ಕ್ರಾಸ್ ನಿವಾಸಿ ಮಧು ಜಿಲ್ಲೆಯಿಂದ ಗಡಿಪಾರು ಶಿಕ್ಷೆಗೊಳಗಾದ ಆರೋಪಿಗಳೆಂದು ಗುರುತಿಸಲಾಗಿದೆ. 

ಆರೋಪಿಗಳಾದ ಮೊಹಮ್ಮದ್ ಖುರ್ರಂ ಪಾಷಾ ಹಾಗೂ ಮಧು ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಈ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿದ್ದರು. ಜೊತೆಗೆ ಸಮಾಜದ ಶಾಂತಿ-ಸುವ್ಯವಸ್ಥೆಗೂ ಧಕ್ಕೆ ತರುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಇವರಿಂದ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ, ಪ್ರಾಣ ಹಾನಿ, ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಒದಗುವ ಸಂದರ್ಭವಿದೆ. ಈ ಕಾರಣದಿಂದ ಇವರನ್ನು ಗಡಿಪಾರುಗೊಳಿಸುವಂತೆ ಸಂಬಂಧಿಸಿದ ಠಾಣೆಯ ಪೊಲೀಸರು ಉಪ ವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. 

ಈ ವರದಿಯ ಆಧಾರದ ಮೇಲೆ ಉಪ ವಿಭಾಗಾಧಿಕಾರಿ ಡಾ.ಎಂ.ದಾಸೇಗೌಡರವರು ಈ ಇಬ್ಬರು ಆರೋಪಿಗಳನ್ನು ಒಂದು ವರ್ಷದ ಅವಧಿಗೆ ಜಿಲ್ಲೆಯಿಂದ ಗಡಿಪಾರುಗೊಳಿಸಿ ಆದೇಶಿಸಿದ್ದಾರೆ. ನ್ಯಾಯಾಲಯದ ವಿಚಾರಣೆಯ ದಿನಾಂಕಗಳನ್ನು ಹೊರತುಪಡಿಸಿ ಜಿಲ್ಲೆಗೆ ಪ್ರವೇಶಿಸುವಂತಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸಿದಲ್ಲಿ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿ, ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News