ಸವಾಲಿನ ದಿನಗಳಲ್ಲಿ ಕೆಪಿಸಿಸಿ ಸಾರಥ್ಯ ಸಿಕ್ಕಿರುವುದು ಹೆಮ್ಮೆಯ ವಿಚಾರ: ದಿನೇಶ್ ಗುಂಡೂರಾವ್

Update: 2018-07-04 17:58 GMT

ಚಿಕ್ಕಮಗಳೂರು, ಜು.4: ಬರಲಿರುವ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾಗಿರುವುದು ಕೆಪಿಸಿಸಿ ಅಧ್ಯಕ್ಷನಾಗಿ ನೇಮಕಗೊಂಡಿರುವ ನನ್ನ ಮಹತ್ತರ ಜವಬ್ದಾರಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಸಕ್ತ ಅತ್ಯಂತ ಕ್ಲಿಷ್ಟಕರವಾದ ಸಂದರ್ಭ ಎದುರಾಗಿದ್ದು, ಈ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷನಾಗಿರುವ ತಾನು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ ಎಂದು ನೂತನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ಜಿಲ್ಲೆಯ ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದ ಅವರು, ದೇವಾಲಯದ ದರ್ಶನದ ಬಳಿಕ ಚಿಕ್ಕಮಗಳೂರು ನಗರ ಸಮೀಪದ ಸೆರಾಯ್ ಹೊಟೇಲ್‍ಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದು, ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಮ್ಮಿಶ್ರ ಸರಕಾರವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದ ಜವಬ್ದಾರಿ ತನ್ನ ಮೇಲಿದೆ ಎಂದ ಅವರು, ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಗ್ರಾಮೀಣ ಮಟ್ಟದ ಜನರಿಗೂ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದರು.

ಕಾಂಗ್ರೆಸ್ ಜಾತ್ಯಾತೀತ  ಪಕ್ಷ, ಸಮಾಜಿಕ ನ್ಯಾಯಕ್ಕೆ ಹೋರಾಡಿದ ಪಕ್ಷ, ಜನರ ಪ್ರಗತಿ, ರಾಜ್ಯ ಬೆಳೆಯಬೇಕೆಂದಿರುವ ಪಕ್ಷವಾಗಿದೆ. ಈ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುವಂತಹ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಪಕ್ಷ ಸಂಘಟನೆಯಲ್ಲಿ ತನ್ನ ಅನುಭವದ ಸಾಮರ್ಥ್ಯ ಮನಗಂಡು ಪಕ್ಷದ ರಾಷ್ಟ್ರೀಯ ಮುಖಂಡರು ಈ ಗುರುತರ ಜವಾಬ್ದಾರಿ ನೀಡಿದ್ದಾರೆ. ಸವಾಲಿನ ದಿನಗಳಲ್ಲಿ ಈ ಹೊಣೆಗಾರಿಕೆ ಸಿಕ್ಕಿರುವ ಬಗ್ಗೆ ತನಗೆ ಅತೀವ ಸಂತಸವಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂಬ ವಿಶ್ವಾಸ ತನ್ನಲ್ಲಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಸಂಬಂಧ ಎಲ್ಲ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದ ಅವರು, ಪತ್ನಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶೃಂಗೇರಿಗೆ ಭೇಟಿನೀಡಿ ದೇವರ ದರ್ಶನ ಪಡೆದು ಶ್ರೀಗಳ ಆಶೀರ್ವಾದ ಪಡೆಯಲು ಶೃಂಗೇರಿಗೆ ಭೇಟಿ ನೀಡಿದೆ. ಕಾಕತಾಳೀಯ ಎಂಬತೆ ಗುರುಗಳ ಆಶೀರ್ವಾದ ಪಡೆದು ಹೊರಬರುತ್ತಿದ್ದಂತೆ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಹುಲ್‍ ಗಾಂಧಿಯವರು ನಿಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಯಶಸ್ವಿಯಾಗಿ ಕೆಲಸ ಮಾಡುವಂತೆ ತಿಳಿಸಿದರು. ನನಗೆ ಬಹಳ ಸಂತೋಷವಾಯಿತು ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ನೇಮಿಸಿದ ರಾಹುಲ್ ಗಾಂಧಿ, ಸೋನಿಯಾಗಾಂಧಿ, ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯ್‍ ಕುಮಾರ್, ಮುಖಂಡರಾದ ಎಂ.ಎಲ್.ಮೂರ್ತಿ, ಕೆ.ಮುಹಮ್ಮದ್, ಸಂದೀಪ್, ಯುವ ಕಾಂಗ್ರೆಸ್‍ನ ಶಿವಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News