ಕರ್ನಾಟಕದ ಬಜೆಟ್ ಅಲ್ಲ, ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳ ಬಜೆಟ್: ಶೆಟ್ಟರ್
ಬೆಂಗಳೂರು, ಜು.5: ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಂಡಿಸಿದ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್ ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹಾಸನ, ರಾಮನಗರ, ಮಂಡ್ಯದ ಅಭಿವೃದ್ಧಿಗೆ ಹೆಚ್ಚು ನೀಡಲಾಗಿದೆ.
ಸಿಎಂ ಕುಮಾರಸ್ವಾಮಿ ಬೆಳಗ್ಗೆ 11:30ಕ್ಕೆ ಬಜೆಟ್ ಮಂಡನೆ ಆರಂಭಿಸಿದ್ದರು. ಮಧ್ಯಾಹ್ನ 1:18ಕ್ಕೆ ಬಜೆಟ್ ಮಂಡನೆ ಮುಗಿಸಿದರು. ಸಿಎಂ ಬಜೆಟ್ ಮಂಡನೆ ಮುಗಿದ ಬೆನ್ನಲ್ಲೇ ವಿಪಕ್ಷ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಕರ್ನಾಟಕದ ಬಜೆಟ್ ಅಲ್ಲ. ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳ ಬಜೆಟ್. ಎಲ್ಲ ಇಲಾಖೆಗಳ ಅನುದಾನ ಕಡಿತ ಮಾಡಲಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇದು ಅಣ್ಣ-ತಮ್ಮಂದಿರ ಬಜೆಟ್. ನಾಡಿನ ಜನತೆಗೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಜೆಟ್ ನಲ್ಲಿ ಎಲ್ಲ ವರ್ಗದವರಿಗೆ ಮೋಸ ಮಾಡಲಾಗಿದೆ. ಹಿಂದುಳಿದ ವರ್ಗದ ಅಭಿವೃಧ್ಧಿಗೆ ಅನುದಾನ ನೀಡಲಾಗಿಲ್ಲ ಎಂದು ಬಿಜೆಪಿ ನಾಯಕ ಕೆ,ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದಕ್ಕೆ ಸಚಿವ ಯುಟಿ ಖಾದರ್ ಮತ್ತು ಝಮೀರ್ ಅಹ್ಮದ್ ಅವರು ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಬಾರಿ ಇದನ್ನು ಸರಿಪಡಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಕರ್ನಾಟಕವನ್ನು ಕಡೆಗಣಿಸಿರುವ ಬಗ್ಗೆ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ