×
Ad

ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಬಜೆಟ್‌ನಲ್ಲಿ ವಿಶೇಷ ಪ್ರಾತಿನಿಧ್ಯ

Update: 2018-07-05 19:35 IST

ಬೆಂಗಳೂರು, ಜು. 5: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಪ್ರಾಬಲ್ಯ ಇರುವ ಹಾಸನ, ರಾಮನಗರ, ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದು, ಮೇಲ್ಕಂಡ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ.

ಹಾಸನ ಹಾಲು ಒಕ್ಕೂಟದಲ್ಲಿ 15 ಲಕ್ಷ ಲೀ.ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ 50 ಕೋಟಿ ರೂ., ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ 30ಕೋಟಿ ರೂ., ಸ್ನಾನಗೃಹ ಉಪಕರಣಗಳ ಉತ್ಪಾದನಾ ಜಿಲ್ಲೆಯಾಗಿ ಅಭಿವೃದ್ದಿ, ತಾಲೂಕಿನ 160 ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಯೋಜನೆಗೆ 70 ಕೋಟಿ ರೂ. ಸೇರಿದಂತೆ ಹಾಸನ ಜಿಲ್ಲೆಗೆ ಸುಮಾರು 200ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳನ್ನು ಪ್ರಕಟಿಸಲಾಗಿದೆ.

ಗುರುವಾರ ವಿಧಾನಸಭೆಯಲ್ಲಿ 2018-19ನೆ ಸಾಲಿನ ಆಯವ್ಯಯ ಮಂಡನೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬೇಲೂರಿನಲ್ಲಿ ಪ್ರವಾಸಿ ಗೈಡ್‌ಗಳಿಗೆ ತರಬೇತಿ ನೀಡಲು ಖಾಸಗಿ ತರಬೇತಿ ಸಂಸ್ಥೆ, ಸ್ಟಾರ್ ಹೊಟೇಲ್ ನಿರ್ಮಾಣಕ್ಕೆ ಪ್ರೋತ್ಸಾಹ, ಹಾಸನದ ಕೆಎಸ್ಸಾರ್ಟಿಸಿ ಘಟಕ ಆಧುನಿಕರಣಕ್ಕೆ 10 ಕೋಟಿ ರೂ, ಹಾಗೂ ಹಾಸನ ನಗರದ ಚನ್ನಪಟ್ಟಣ ಕೆರೆಯ ಅಭಿವೃದ್ಧಿಗೆ 36 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ಮೈಸೂರಿನಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ರೇಶ್ಮೆಗೂಡು ಮಾರುಕಟ್ಟೆ ಸ್ಥಾಪನೆ, 1 ಕೋಟಿ ರೂ. ವೆಚ್ಚದಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಹಾಗೂ ಇತರ ರೋಗಗಳಿಗೆ ಸಂಬಂಧಿಸಿದ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ. ಚಾಮರಾಜನಗರ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ಸ್ಥಾಪನೆಗೆ 200 ಕೋಟಿ ರೂ., ಮೈಸೂರು ನಗರ ಹಾಗೂ ಮಾರ್ಗ ಮಧ್ಯದ 92ಹಳ್ಳಿಗಳಿಗೆ ಹಳೆ ಉಂಡವಾಡಿ ಬಳಿ ಕಾವೇರಿ ನದಿಯಿಂದ ಹೆಚ್ಚುವರಿಯಾಗಿ 300 ಎಂಎಲ್‌ಡಿ ನೀರು ಪೂರೈಕೆ ಯೋಜನೆಗೆ 50 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು 800ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 30 ಕೋಟಿ ರೂ., ವಿಶ್ವ ಪ್ರಸಿದ್ಧ ಗಗನಚುಕ್ಕಿ, ಭರಚುಕ್ಕಿ ಜಲಪಾತ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಹೆಚ್ಚುವರಿ ಪ್ರವಾಸಿ ಸೌಲಭ್ಯ ಒದಗಿಸಲು 5 ಕೋಟಿ ರೂ., ಲೋಕಪಾವನಿ ನದಿಯಿಂದ ಮಂಡ್ಯ ಜಿಲ್ಲೆಯ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಮಂಡ್ಯ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ 30 ಕೋಟಿ ರೂ., ಮಂಡ್ಯ ನಗರದ ಸರ್ವತೋಮುಖ ಅಭಿವೃದ್ಧಿಗೆ 50ಕೋಟಿ ರೂ.ವಿಶೇಷ ಪ್ಯಾಕೇಜ್ ಪ್ರಕಟಿಸಲಾಗಿದೆ.

ಅದೇ ರೀತಿಯಲ್ಲಿ ರಾಮನಗರ ಜಿಲ್ಲೆ ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ, ರಾಮನಗರ ಶೀಘ್ರಗತಿ ಬೆಳವಣಿಗೆ ಹಿನ್ನೆಲೆಯಲ್ಲಿ 300 ಹಾಸಿಗೆಗಳ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ 40 ಕೋಟಿ ರೂ.ನೀಡಲಾಗಿದೆ. ಜಿಲ್ಲೆಯ ಪ್ರವಾಸಿ ಚಟುವಟಿಕೆಗಳನ್ನು ಮತ್ತಷ್ಟು ಸದೃಢಗೊಳಿಸಲು ರಾಮನಗರ ಬಳಿ ಆರ್ಟ್ಸ್ ಅಂಡ್ ಕ್ರಾಫ್ಟ್ ವರ್ಲ್ಡ್ ವಿಲೇಜ್ ಅನ್ನು ಮತ್ತು ಕಣ್ವ ಜಲಾಶಯದ ಪ್ರವೇಶದಲ್ಲಿ ಚಿಲ್ಡ್ರನ್ಸ್ ವರ್ಲ್ಡ್ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಿಸಿದರು.

ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವ ವಿದ್ಯಾಲಯ ತೆರೆಯಲು 30 ಕೋಟಿ ರೂ.ಬಂಡವಾಳ ನೀಡಲು ಉದ್ದೇಶಿಸಿದ್ದೇನೆ. ಅಲ್ಲದೆ, ರಾಮನಗರ ಫಿಲ್ಮ್‌ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್ ರೆಕಾರ್ಡಿಂಗ್ ಮಾಡುವ ಸಂಸ್ಥೆ, ಅನಿಮೇಷನ್ ಸ್ಟುಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ಸ್ ಸ್ಟುಡಿಯೋಗಳು ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ.ಬಂಡವಾಳ ಹೂಡಲಾಗುವುದು’
-ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News