ಸೌದಿ ‘ರಿಯಾಲ್’ ದರ ಏರಿಕೆಯಿಂದಾಗಿ ಹೆಚ್ಚುವರಿ ಶುಲ್ಕ ಸಂಗ್ರಹ: ಭಾರತೀಯ ಹಜ್ ಸಮಿತಿ ಸ್ಪಷ್ಟಣೆ

Update: 2018-07-05 14:56 GMT

ಬೆಂಗಳೂರು, ಜು.5: ಪ್ರಸಕ್ತ ಸಾಲಿನ ಪವಿತ್ರ ಹಜ್‌ ಯಾತ್ರೆಗೆ ತೆರಳುತ್ತಿರುವ ದೇಶದ ಯಾತ್ರಿಗಳು ಸೌದಿ ಅರೇಬಿಯಾದ ರಿಯಾಲ್(ಎಸ್‌ಎಆರ್) ದರ ಹೆಚ್ಚಳದಿಂದಾಗಿ ಈಗಾಗಲೆ ಪಾವತಿಸಿರುವ ಶುಲ್ಕದೊಂದಿಗೆ ಕೆಲವು ಸೌಲಭ್ಯಗಳಿಗೆ ಹೆಚ್ಚುವರಿಯಾಗಿ ಹಣ ಪಾವತಿಸುವಂತೆ ಭಾರತೀಯ ಹಜ್ ಸಮಿತಿಯು ಸೂಚನೆ ನೀಡಿದೆ.

ಭಾರತೀಯ ಹಜ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಖ್ಸೂದ್ ಅಹ್ಮದ್‌ ಖಾನ್, ಜೂ.26ರಂದು ಹೊರಡಿಸಿರುವ ಸುತ್ತೋಲೆ ಸಂಖ್ಯೆ 42ರಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹಕ್ಕೆ ಕಾರಣವಾದ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ವಿಮಾನ ನಿಲ್ದಾಣದಿಂದ ಯಾತ್ರಿಗಳನ್ನು ಅವರು ವಾಸ್ತವ್ಯ ಹೂಡುವ ಸ್ಥಳಕ್ಕೆ ಕರೆದೊಯ್ಯುವ ಬಸ್ ಪ್ರಯಾಣ ದರವನ್ನು 347.50 ಸೌದಿ ರಿಯಾಲ್ಗಳಿಂದ 391.18 ಸೌದಿ ರಿಯಾಲ್ಗೆ ಹೆಚ್ಚಳ ಮಾಡಲಾಗಿದೆ. ಮೆಟ್ರೋ ರೈಲು ಪ್ರಯಾಣ ದರವನ್ನು 250 ಸೌದಿ ರಿಯಾಲ್ಗಳಿಂದ 400 ಸೌದಿ ರಿಯಾಲ್ಗೆ ಹೆಚ್ಚಳ ಮಾಡಲಾಗಿದೆ. ಮಿನಾದಲ್ಲಿ ನಿರ್ಮಿಸಿರುವ ಟೆಂಟ್‌ಗಳಲ್ಲಿ ಹಾಕಲಾಗಿರುವ ಹಾಸಿಗೆಯ ಶುಲ್ಕ 147 ಸೌದಿ ರಿಯಾಲ್(ಶೇ.5ರಷ್ಟು ವ್ಯಾಟ್ ಸೇರಿದಂತೆ)ಗೆ ನಿಗದಿ ಮಾಡಲಾಗಿದೆ. ಐಡಿಬಿ ವತಿಯಿಂದ ವಿತರಿಸಲಾಗಿರುವ ಅದಾಹಿ ಕೂಪನ್‌ಗಳ ಶುಲ್ಕವನ್ನು 450 ಸೌದಿ ರಿಯಾಲ್ಗಳಿಂದ 475 ಸೌದಿ ರಿಯಾಲ್ಗೆ ಹೆಚ್ಚಿಸಲಾಗಿದೆ.

ಅಲ್ಲದೆ, ಏರ್ ಇಂಡಿಯಾವು ವಿಮಾನ ನಿಲ್ದಾಣದ ತೆರಿಗೆಗಳನ್ನು ಹೆಚ್ಚಳ ಮಾಡಿರುವ ಪರಿಣಾಮವಾಗಿ, ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡುವ ಯಾತ್ರಿಗಳು ತಲಾ 200 ರೂ., ಗೋವಾದಿಂದ ತೆರಳುವವರು ತಲಾ 850 ರೂ., ಕೋಲ್ಕತ್ತಾದಿಂದ ಪ್ರಯಾಣ ಬೆಳೆಸುವ ಯಾತ್ರಿಗಳು ತಲಾ 850 ರೂ.ಗಳನ್ನು ಪಾವತಿಸಬೇಕಿದೆ. ಮುಂಬೈಯಿಂದ ತೆರಳುವ ಯಾತ್ರಿಗಳು 250 ರೂ., ನಾಗ್ಪುರದಿಂದ ತೆರಳುವವರು 200 ರೂ, ಶ್ರೀನಗರದಿಂದ ಹೊರಡುವವರು 900 ರೂ.ಹಾಗೂ ವಾರಣಾಸಿಯಿಂದ ಪ್ರಯಾಣ ಬೆಳೆಸುವ ಯಾತ್ರಿಗಳು ತಲಾ 850 ರೂ.ಗಳನ್ನು ಪಾವತಿಸಬೇಕಿದೆ.

ಇದಲ್ಲದೆ, ಐಚ್ಛಿಕವಾಗಿ ನಿರ್ವಹಿಸುವ(ಅದಾಹಿ(ಕುರ್ಬಾನಿ), ಜೋಹ್ಫಾ ಮೀಖತ್ ಹಾಗೂ ಪುನರಾವರ್ತಿತ) ಶುಲ್ಕವನ್ನು ಸೌದಿ ಅರೇಬಿಯಾ ರಿಯಾಲ್ ದರ ಏರಿಕೆಯಿಂದಾಗಿ ಹೆಚ್ಚಳ ಮಾಡಲಾಗಿದೆ. ಐಡಿಬಿ (ಇಸ್ಲಾಮಿಕ್ ಡೆವಲಪ್ ಮೆಂಟ್ ಬ್ಯಾಂಕ್) ವತಿಯಿಂದ ಕುರ್ಬಾನಿ ಕೂಪನ್‌ಗಾಗಿ 8508 ರೂ.ಗಳನ್ನು ಪಾವತಿಸಬೇಕಿದೆ. ಈಗಾಗಲೆ 8 ಸಾವಿರ ರೂ.ಗಳನ್ನು ಪಾವತಿಸಿರುವವರು ಹೆಚ್ಚುವರಿಯಾಗಿ 508 ರೂ.ಗಳನ್ನು ಪಾವತಿಸಬೇಕು.

ಶಿಯಾ ಮುಸ್ಲಿಮರು ನಿರ್ವಹಿಸುವ ಜೋಹ್ಫಾ ಮೀಖತ್‌ಗಾಗಿ ಹೆಚ್ಚುವರಿಯಾಗಿ ತಲಾ 31 ರೂ.ಗಳನ್ನು ಪಾವತಿಸಬೇಕು. ಪುನರಾವರ್ತಿತ ಯಾತ್ರಿಗಳು 35,821 ರೂ.ಗಳನ್ನು ಪಾವತಿಸಬೇಕಿದ್ದು, ಈಗಾಗಲೆ ಈ ಮೊತ್ತವನ್ನು ಪಾವತಿಸಿರುವವರು ಹೆಚ್ಚುವರಿಯಾಗಿ 619 ರೂ.ಗಳನ್ನು ಪಾವತಿಸಬೇಕು.

ಹೆಚ್ಚುವರಿಯಾಗಿರುವ ಈ ಮೊತ್ತವನ್ನು ನಗದು ಅಥವಾ ನಿಗದಿತ ಹಜ್ ಮಾರ್ಗಸೂಚಿಯೊಂದಿಗೆ ಲಗತ್ತಿಸಿರುವ ಗ್ರೀನ್ ಪೇ ಇನ್ ಸ್ಲಿಪ್ ಮೂಲಕ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಭಾರತೀಯ ಹಜ್ ಸಮಿತಿಯ ಖಾತೆ ಸಂಖ್ಯೆ 32175020010 ‘Fee Type 25’ ಅಥವಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭಾರತೀಯ ಹಜ್ ಸಮಿತಿಯ ಖಾತೆ ಸಂಖ್ಯೆ 318702010406009 ಅಥವಾ www.hajcommittee.gov.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಪಾವತಿಸಬಹುದಾಗಿದೆ.

ಮದೀನಾದಲ್ಲಿ ಯಾತ್ರಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಈ ಹಿಂದೆ ನಿಗದಿ ಪಡಿಸಿದ್ದ ಶುಲ್ಕ 950 ಸೌದಿ ರಿಯಾಲ್ಗಳನ್ನು 900 ಸೌದಿ ರಿಯಾಲ್ಗೆ ಇಳಿಕೆ ಮಾಡಲಾಗಿದೆ.

-ಡಾ.ಮಖ್ಸೂದ್ ಅಹ್ಮದ್‌ಖಾನ್, ಸಿಇಓ, ಭಾರತೀಯ ಹಜ್ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News