ರಾಜ್ಯದ 5 ಕಡೆ ಎಸಿಬಿ ದಾಳಿ

Update: 2018-07-05 14:47 GMT

ಬೆಂಗಳೂರು, ಜು.5: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ರಾಜ್ಯದ ಬಾಗಲಕೋಟೆ ಜಿಲ್ಲೆ ಸೇರಿದಂತೆ ಐದು ಕಡೆ ಎಸಿಬಿ ದಾಳಿ ನಡೆಸಿದೆ.

ಬಾಗಲಕೋಟೆ: ಕರ್ನಾಟಕ ನಿರಾವರಿ ನಿಗಮದ ಎಲೆಕ್ಟ್ರಿಕಲ್ ಸಬ್-ಡಿವಿಷನ್ ಸಹಾಯಕ ಕಾರ್ಯಪಾಲಕ ಶಿವಲಿಂಗಪ್ಪ ಬಸ್ಪಪ್ಪ ಹಡಗಲಿ ಎಂಬಾತ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಗುರುವಾರ ಯರಗಟ್ಟಿಯಲ್ಲಿನ ವಾಸದ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿತು.

ಮೈಸೂರು: ಜಮೀನು ಖಾತೆ ಬದಲಾವಣೆ ಮಾಡಿಕೊಡುವಂತೆ ಕೋರಿದ್ದ ವ್ಯಕ್ತಿಯಿಂದ 5 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಹುಣಸೂರು ತಾಲೂಕಿನ ಗಾವಡಗೆರೆ ರಾಜಸ್ವ ನಿರೀಕ್ಷಕ ಜಿ.ವಿ.ವಿಷಕಂಠನಾಯ್ಕ ಎಂಬಾತ ಎಸಿಬಿ ಬಲೆಗೆ ಬಿದ್ದಿದ್ದಾನೆ. ಈ ಸಂಬಂಧ ಮೈಸೂರು ಎಸಿಬಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

ತುಮಕೂರು: ಭೂಮಿಯ ಖಾತೆಯ ಬದಲಾವಣೆ ಮಾಡಿಕೊಡಲು15 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಮಧುಗಿರಿ ತಾಲೂಕಿನ ಯಲ್ಕೂರು ವೃತ್ತದ ಗ್ರಾಮಲೆಕ್ಕಾಧಿಕಾರಿ ಚಂದ್ರಶೇಖರ್ ಎಂಬುವರು ಎಸಿಬಿ ಬಲೆಗೆ ಬಿದಿದ್ದು, ಇಲ್ಲಿನ ತುಮಕೂರು ಎಸಿಬಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕೋಲಾರ: ಇ-ಸ್ವತ್ತಿನ ಖಾತೆಯಲ್ಲಿ ಬದಲಾವಣೆಗಾಗಿ ಲಂಚಕ್ಕೆ ಬೇಡಿಯಿಟಿದ್ದ ವಡಗೂರು ಗ್ರಾಮ ಪಂಚಾಯತ್ ಎಸ್‌ಡಿಎ ನಾಗರಾಜ್ ಎಸಿಬಿ ಬಲೆಗೆ ಬಿದ್ದಿದ್ದು, ಆರೋಪಿ ವಿರುದ್ಧ ಕೋಲಾರ ಜಿಲ್ಲಾ ಎಸಿಬಿ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ, ಲಂಚ ಸ್ವೀಕಾರ ಮಾಡಿದ್ದ ನಗದು ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ: ಕೋ-ಆಪರೇಟಿವ್ ಸೊಸೈಟಿ ನೋಂದಣಿಗಾಗಿ 25 ಸಾವಿರ ರೂ. ಲಂಚ ನೀಡವಂತೆ ಒತ್ತಡ ಹಾಕಿದ್ದ ದಾವಣಗೆರೆಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫ್ ಕೋ-ಆಪ್‌ರೇಟಿವ್ ಸೊಸೈಟೀಸ್ ಶಾಖಾಧೀಕ್ಷಕಿ ಗೀತಾ ಎಂಬಾಕೆ ಲಂಚ ಸ್ವೀಕಾರ ಮಾಡುತ್ತಿದ್ದಾಗ ಎಸಿಬಿ ಬಲೆಗೆ ಬಿದಿದ್ದಾರೆ. ಈಕೆಯ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News