ಗಂಗಾಧರ ಚಡಚಣ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಸಿಐಡಿ ಬಲೆಗೆ
ವಿಜಯಪುರ, ಜು.5: ಭೀಮಾತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹದೇವ ಸಾಹುಕಾರ್ ಬೈರಗೊಂಡನನ್ನು ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಗುರುವಾರ ಇಂಡಿ ತಾಲೂಕಿನ ಕೆರೂರು ಗ್ರಾಮದ ಅವರ ನಿವಾಸದಲ್ಲಿ ಮಹದೇವನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಗಂಗಾಧರ ಚಡಚಣ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹದೇವ ಸಾಹುಕಾರ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ. ಹಲವು ದಿನಗಳಿಂದ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಅಲ್ಲದೆ, ಹಲವು ದಿನಗಳಿಂದ ಮನೆಗೆ ಬರದ ಕಾರಣ ಅಲ್ಲಿಗೆ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯೊಂದಿಗೆ ಸಿಐಡಿ ಕಾದಿತ್ತು.
ಬುಧವಾರ ಮಧ್ಯರಾತ್ರಿ ಮಹದೇವ ಸಾಹುಕಾರ್ ಗುಟ್ಟಾಗಿ ಮನೆಗೆ ಬಂದಿರುವ ವಿಷಯ ತಿಳಿದ ಪೊಲೀಸರು ಕೂಡಲೇ ಆತನನ್ನು ಬಂಧಿಸಿ ಚಡಚಣ ಠಾಣೆಗೆ ಕರೆದೊಯ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನ್ನನ್ನು ಬಂಧಿಸದಂತೆ ಸಾಹುಕಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜು.2ರಂದು ವಿಜಯಪುರ ಹೆಚ್ಚುವರಿ ಜಿಲ್ಲಾ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಇನ್ನೂ 9 ಮಂದಿಯನ್ನು ಬಂಧಿಸಲಾಗಿದ್ದು, ಅವರು ನ್ಯಾಯಾಂಗ ವಶದಲ್ಲಿದ್ದಾರೆ.