ಸಾರ್ವಜನಿಕರಿಗೆ ಅಗತ್ಯ ಮರಳು ಒದಗಿಸಲು ಕ್ರಮ: ಶಿವಮೊಗ್ಗ ಜಿಲ್ಲಾಧಿಕಾರಿ
ಶಿವಮೊಗ್ಗ, ಜು.5: ಎಲ್ಲಾ ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಪಾರದರ್ಶಕವಾಗಿ ಅಗತ್ಯ ಮರಳು ಒದಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮರಳು ಸಮಿತಿ ಸಭೆ ನಡೆಸಿದರು. ಎರಡನೇ ಹಂತದ ಸಾಮಾನ್ಯ ಮರಳು ಹರಾಜು ಪ್ರಕ್ರಿಯೆಯಲ್ಲಿ 23 ಮರಳು ಬ್ಲಾಕ್ ಗಳ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿ ಮರಳನ್ನು ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸಾಫ್ಟ್ ವೇರ್ ಸಿದ್ಧವಿದೆ. ನಿಗದಿತ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಮರಳಿನ ದರ, ಲಾರಿ ಬಾಡಿಗೆ ಇತ್ಯಾದಿ ಮಾಹಿತಿಗಳನ್ನು ಒಳಗೊಂಡ ಫಲಕಗಳನ್ನು ಒಂದು ವಾರದ ಒಳಗಾಗಿ ಅಳವಡಿಸಬೇಕು. ಸಾರ್ವಜನಿಕರು ಯಾವುದೇ ತಾಲೂಕಿನಲ್ಲಿ ಮರಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಅರ್ಜಿ ಸಲ್ಲಿಸಿದ ತಕ್ಷಣ ಮರಳು ಸರಬರಾಜು ಆಗುವ ದಿನಾಂಕ ಇತ್ಯಾದಿ ಮಾಹಿತಿಯ ಸಂದೇಶ ಅರ್ಜಿದಾರನ ಮೊಬೈಲ್ ಗೆ ಬರಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಮಾದರಿಯಲ್ಲಿ ಮರಳು ಪೂರೈಕೆ ಮಾಡಬೇಕು. ಮರಳಿಗೆ ವೈಜ್ಞಾನಿಕ ದರ ನಿಗದಿ ಮಾಡಿ ಪಾರದರ್ಶಕವಾಗಿ ದೊರೆಯುವಂತೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಅನಧಿಕೃತವಾಗಿ ಮರಳು ಸಾಗಾಟ ತಡೆಯಲು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಾಲೂಕು ಮಟ್ಟದಲ್ಲಿ ಮರಳು ಉಸ್ತುವಾರಿ ಸಮಿತಿ ಸಭೆಯನ್ನು ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಮಾಡಬೇಕು. ಉಪವಿಭಾಗಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ಕ್ರಷರ್ ಗೆ ಅನುಮತಿ ಇಲ್ಲ: ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಮತ್ತು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿರುವ ಕಡೆಗಳಲ್ಲಿ ಕ್ರಷರ್ ನಡೆಸಲು ಹೊಸದಾಗಿ ಅನುಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟಪಡಿಸಿದರು.
ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಇಲ್ಲದ ಕಡೆಗಳಲ್ಲಿ ಕ್ರಷರ್ ಆರಂಭಿಸಲು ಅನುಮತಿ ಕೋರಿದರೆ ಸಂಬಂಧಪಟ್ಟ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ನಿರಾಕ್ಷೇಪಣಾ ಪತ್ರ ಸಲ್ಲಿಸಿದರೆ ಪರವಾನಿಗೆಯನ್ನು ಪರಿಶೀಲಿಸಬಹುದಾಗಿದೆ. ಇದೇ ರೀತಿ ಈಗಾಗಲೇ ಇರುವ ಕ್ರಷರ್ಗಳ ಪರವಾನಿಗೆ ನವೀಕರಣಕ್ಕಾಗಿ ಸಲ್ಲಿಸಿರುವ ಅರ್ಜಿಗಳ ಪ್ರಸ್ತಾವನೆಯನ್ನು ಸೂಕ್ತ ಮಾರ್ಗದರ್ಶನಕ್ಕಾಗಿ ಸರ್ಕಾರಕ್ಕೆ ಕಳುಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಧಿಕಾರಿಗಳು, ತಹಶೀಲ್ದಾರ್ಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.