ಸಂವಿಧಾನ ಮತ್ತು ಮೀಸಲಾತಿ ರಕ್ಷಣೆ ಬಿಎಸ್‍ಪಿಯಿಂದ ಮಾತ್ರ ಸಾಧ್ಯ: ಬಿಎಸ್‍ಪಿ ರಾಷ್ಟ್ರೀಯ ಸಂಯೋಜಕ ವೀರ್ ಸಿಂಗ್

Update: 2018-07-06 17:34 GMT

ಮೈಸೂರು,ಜು.6: ಸಂವಿಧಾನದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದ್ದು, ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮುಂದಿದೆ. ಬಿಎಸ್‍ಪಿ ಆ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕ ವೀರ್ ಸಿಂಗ್ ಅಭಿಪ್ರಾಯಿಸಿದರು.

ನಗರದ ಕಲಾಮಂದಿರದಲ್ಲಿ ಶುಕ್ರವಾರ ಮೈಸೂರು ವಲಯ ಮಟ್ಟದ ಬಿಎಸ್‍ಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು  ಮಾತನಾಡಿದರು. ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಗೆ ಗಂಡಾಂತರ ಬಂದೊದಗಿದ್ದು, ಅವುಗಳ ರಕ್ಷಣೆ ಬಿಎಸ್‍ಪಿ ಯಿಂದ ಮಾತ್ರ ಸಾಧ್ಯ. ಮೀಸಲಾತಿ ವ್ಯವಸ್ಥೆ ಮತ್ತು ಸಂವಿಧಾನ ಉಳಿಯಬೇಕಾದರೆ ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ದೇಶದ ಮುಂದಿನ ಪ್ರಧಾನಿಯಾಗಬೇಕು, ಆ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ನಾವು ಒಂದು ಸ್ಥಾನವನ್ನು ಗೆದ್ದು ಮಂತ್ರಿ ಸ್ಥಾನವನ್ನು ಪಡೆದಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಗೆ ಕನಿಷ್ಠ ಎರಡು ಲೋಕಸಭಾ ಸ್ಥಾನವನ್ನಾದರೂ ಗೆಲ್ಲಬೇಕು. ಹಾಗಾಗಿ ಕಾರ್ಯಕರ್ತರು ಈಗಿನಿಂದಲೇ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಜನರನ್ನು ಮುಟ್ಟುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.

ಕೇಂದ್ರದ ನರೇಂದ್ರ ಮೋದಿ ಸರಕಾರ ಆರ್‍ಎಸ್‍ಎಸ್ ಸಂಘಟನೆಯ ರಿಮೋಟ್ ಕಂಟ್ರೋಲ್. ಬಿಜೆಪಿಯವರು ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಬದಲಿಸಿ ಆರ್‍ಎಸ್‍ಎಸ್ ಸಿದ್ಧಪಡಿಸಿರುವ ಸಂವಿಧಾನವನ್ನು ಹೇರಲು ಸಂಚು ರೂಪಿಸಿವೆ. ಅದಕ್ಕೆ ಬಿಎಸ್‍ಪಿ ಕಾರ್ಯಕರ್ತರು ಅವಕಾಶ ನೀಡಬಾರದು ಎಂದು ಹೇಳಿದರು.

ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವ ಮೂಲಕ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ತಂದಿದ್ದರು. ಆದರೆ ಈಗಿನ ಕೇಂದ್ರ ಸರಕಾರ ಖಾಸಗಿ ವಲಯದಲ್ಲಿ ಮೀಸಲಾಗಿ ನೀಡದೆ ದಲಿತರು ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮೀಸಲಾತಿ ವ್ಯವಸ್ಥೆಯೇ ಮಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಕೊಳ್ಳೇಗಾಲದಲ್ಲಿ ಗೆಲವು ಪಡೆಯಲು ಬಿಎಸ್‍ಪಿ ಪಕ್ಷದ ಕಾರ್ಯಕರ್ತರ ಜೊತೆಗೆ ವೈಯಕ್ತಿಕ ವರ್ಚಸ್ಸು ಕಾರಣ. ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಸಾಕಷ್ಟು ಕೆಲಸ ಮಾಡಬೇಕಿದೆ. ಮಾಯಾವತಿ ಅವರ ಸೂಚನೆ ಮೇರೆಗೆ ಎಲ್ಲಾ ಜಿಲ್ಲಾ ಸಮಿತಿಗಳನ್ನು ಪುನರ್ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಯಪ್ರಕಾಶ್ ಸಿಂಗ್ ಮಾತನಾಡಿ, ರಾಜಕೀಯವಾಗಿ ಶಕ್ತಿ ಪಡೆದರಷ್ಟೇ ದಲಿತರಿಗೆ ಉಳಿಗಾಲ. ಇಲ್ಲದಿದ್ದರೆ ದಲಿತರನ್ನು ರಾಜಕೀಯವಾಗಿ ಮುಗಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದರು. ರಾಜಕೀಯಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ. ಮಾಯಾವತಿ ಅವರನ್ನು ಪ್ರಧಾನಿ ಹುದ್ದೆಗೇರಿಸುವ ಅತ್ಯುತ್ತಮ ಅವಕಾಶ ಒದಗಿಬಂದಿದ್ದು, ಅದು ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ ಎಂದು ಹೇಳಿದರು.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳ ಪದಾಧಿಕಾರಿಗಳು, ಎಲ್ಲ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಬಿಎಸ್‍ಪಿ ರಾಜ್ಯ ಉಸ್ತುವಾರಿ ಅಶೋಕ್ ಕುಮಾರ್ ಸಿದ್ದಾರ್ಥ, ಕೇರಳ ಮತ್ತು ತಮಿಳುನಾಡು ಉಸ್ತುವಾರಿ ಶ್ರೀನಿವಾಸ್, ಪಕ್ಷದ ರಾಜ್ಯಾಧ್ಯಕ್ಷ ಪ್ರೊ.ಹರಿರಾಂ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರಕಲವಾಡಿ ನಾಗೇಂದ್ರ, ಮಾದೇಶ್ ಉಪ್ಪಾರ್, ಮೈಸೂರು ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೈಸೂರು ವಿಭಾಗೀಯ ಉಸ್ತುವಾರಿಗಳಾದ ವೇಲಾಯುಧನ್, ಸಿದ್ದಯ್ಯ ಮಂಡ್ಯ, ಗಂಗಾಧರ್, ಅಮೃತ, ಭೀಮನಹಳ್ಳಿ ಸೋಮೇಶ್, ರಾಹುಲ್ ನಾಗೇಶ್, ನರಸಿಂಹ ಮೂರ್ತಿ, ಜಾಕೀರ್ ಹುಸೇನ್, ರಘು ಧರ್ಮಸೇನ ಪಾಲ್ಗೊಂಡಿದ್ದರು.

ಕರ್ನಾಟಕದಲ್ಲಿ ಬಿಎಸ್‍ಪಿಯ ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಮಾಯಾವತಿ ಪ್ರಧಾನಿಯಾಗಲು ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಹೋರಾಟದ ಮೂಲಕ ನಾವು ಆಧಿಕಾರ ಪಡೆಯಬೇಕು, ಹಲವಾರು ವರ್ಷಗಳ ಹೋರಾಟದ ಫಲದಿಂದ ಎನ್.ಮಹೇಶ್ ಗೆಲುವು ಸಾಧಿಸಿ ಮಂತ್ರಿಯಾಗಿದ್ದಾರೆ.
-ಡಾ.ಅಶೋಕ್‍ಕುಮಾರ್ ಸಿದ್ಧಾರ್ಥ, ರಾಜ್ಯಸಭಾ ಸದಸ್ಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News