ದಾವಣಗೆರೆ: ಮೂವರು ಅಂತರಾಜ್ಯ ಕಳ್ಳರ ಬಂಧನ; 67 ಲಕ್ಷ ರೂ. ಮೌಲ್ಯದ ಕಾರುಗಳ ವಶ

Update: 2018-07-06 17:43 GMT

ದಾವಣಗೆರೆ,ಜು.06: ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡದ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು. 

ಗೋವಾದ ವಾಸೀಂ ಸೈಯದ್, ಶಾಫಿ, ನಝೀರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಒಟ್ಟು 67 ಲಕ್ಷ ರೂ ಮೌಲ್ಯದ ತಲಾ ಒಂದು ಇನ್ನೋವಾ ಕಾರು, ಡಸ್ಟರ್, ಮಾರುತಿ ಬ್ರೀಝಾ ಮತ್ತು ಹ್ಯೂಂಡೈ ಕ್ರೆಟಾ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.   

ಕಳೆದ ಜೂನ್ 14 ರಂದು ಶಾಮನೂರು ಗ್ರಾಮದ ನಾಗಮ್ಮ ಕೇಶವಮೂರ್ತಿ ಬಡಾವಣೆಯ ವಾಸಿ ಅಂಜಿನಪ್ಪ ಎಂಬವರು ತಮ್ಮ ಇನ್ನೋವಾ ಕಾರನ್ನು ತನುಶ್ರೀ ವಾಟರ್ ಪಾಯಿಂಟ್‍ನಲ್ಲಿ ಸರ್ವಿಸ್‍ಗೆ ಬಿಟ್ಟಿದ್ದರು. ಮಧ್ಯಾಹ್ನ 1.30 ರ ಸುಮಾರಿಗೆ ಕಾರನ್ನು ಕೇಳಿದಾಗ ಕೆಲಸಗಾರ ರಾಕೇಶ್ ಎಂಬಾತ ಅಪರಿಚಿತ ವ್ಯಕ್ತಿ ಬಂದು ತಮ್ಮ ಕಾರಿನ ಕೀಯನ್ನು ಪಡೆದುಕೊಂಡು ಕಾರನ್ನು ಕೊಂಡೊಯ್ದಿರುವುದಾಗಿ ತಿಳಿಸಿದ್ದಾನೆ. ಇದರಿಂದ ಮೋಸಹೋಗಿರುವುದನ್ನು ತಿಳಿದ ಅಂಜಿನಪ್ಪ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ತಿಳಿಸಿದರು.

ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಈ ಕಾರನ್ನು ಗೋವಾಗೆ ಕೊಂಡೊಯ್ದಿರುವುದು ತಿಳಿಯುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ರಾಜ್ಯದ ವಾಸೀಂ ಸೈಯದ್, ಶಾಫಿ, ನಝಿರ್ ಅವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಇಂಥಹ ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿರುವುದರಿಂದ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.

ಅಪಘಾತದಲ್ಲಿ ಹಾಳಾದ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಂತರ ಅದೇ ಮಾದರಿಯ ಮತ್ತು ಅದೇ ಬಣ್ಣದ ಬೇರೊಂದು ಕಾರನ್ನು ಕದ್ದು, ಆ ಕಾರಿಗೆ ಖರೀದಿಸಿದ ಕಾರಿನ ನಂಬರನ್ನು ಅಳವಡಿಸಿ ಮಾರಾಟ ಮಾಡುವುದು ಈ ಕಳ್ಳರ ಕೆಲಸವಾಗಿತ್ತು. ಇಂಥಹ ಚಾಣಾಕ್ಷ ಕಳ್ಳರ ಬಂಧನ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಡಿವೈಎಸ್‍ಪಿ ಎಂ.ಬಾಬು, ಸಿಬ್ಬಂದಿಗಳಾದ ಕೆ.ಆನಂದ, ಸಿದ್ದೇಶ್, ಸಿದ್ದೇಗೌಡ, ರೇವಣಸಿದ್ದಪ್ಪ, ತಿಪ್ಪೇಸ್ವಾಮಿ, ಆಂಜನೇಯ, ಲೋಕಾನಾಯ್ಕ,ಮಂಜುನಾಥ, ಸೈಯದ್ ಅಲಿ ಇತರರು ಭಾಗವಹಿಸಿದ್ದರು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News