‘ದಲೈಲಾಮರಿಂದ ವಿಶ್ವಕ್ಕೆ ಶಾಂತಿ, ಮಾನವತೆಯ ಸಂದೇಶ ’
ಮುಂಡಗೋಡ, ಜು.6: ಮುಂಡಗೋಡ ತಾಲೂಕಿನ ಟಿಬೆಟಿಯನ್ ಕಾಲನಿಯ ದ್ರೆಪುಂಗ್ ಲೊಸಲಿಂಗ್ ಬೌದ್ಧಮಠದ ಪ್ರಾರ್ಥನಾ ಸಭಾಂಗಣದಲ್ಲಿ ಶುಕ್ರವಾರ 14ನೇ ದಲೈಲಾಮಾ ಅವರ 83ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಸುಲೇಖಾ ತಾಯಿ ಕುಂಬಾರೆ ಕೇಕ್ ಕತ್ತರಿಸುವ ಮೂಲಕ ದಲೈಲಾಮಾ ಹುಟ್ಟುಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ತನ್ನ ಜೀವನದಲ್ಲಿ ಇದೊಂದು ಸೌಭಾಗ್ಯದ ದಿನವೆಂದು ಭಾವಿಸುತ್ತೇನೆ. ಭಾರತವು ಅಧ್ಯಾತ್ಮಿಕ ದೇಶವಾಗಿದ್ದು, ಬೌದ್ಧ ಧರ್ಮದ ಅನುಯಾಯಿಯಾಗಿದೆ. ಹಾಗಾಗಿ ಟಿಬೆಟಿಯನ್ನರು ನಿರಾಶ್ರಿತರೆಂದು ತಿಳಿಯಬಾರದು. ಏಕೆಂದರೆ ಬುದ್ಧನು ಜನಿಸಿದ್ದು ಭಾರತದಲ್ಲಿ ಮತ್ತು ಬುದ್ಧನ ತತ್ವ ಉಪದೇಶಗಳನ್ನು ಭಾರತದಲ್ಲಿಯೂ ಅನುಸರಿಸಲಾಗುತ್ತದೆ. ನೀವೂ ಕೂಡ ಭಾರತದವರಲ್ಲಿ ಒಂದಾಗಬೇಕು. ದೇಶದ ಮಿಲಿಟರಿ ಪಡೆಯಲ್ಲಿಯೂ ಟಿಬೆಟಿಯನ್ನರು ಇದ್ದಾರೆ. 14ನೇ ದಲೈಲಾಮಾ ಅವರು ಶಾಂತಿ ಮತ್ತು ಮಾನವತೆಯ ಸಂದೇಶವನ್ನು ಸಾರಿದ್ದಾರೆ. ದಲೈಲಾಮಾರು ಅಧ್ಯಾತ್ಮದ ನಾಯಕ. ಅವರ ತತ್ವ ಆದರ್ಶಗಳನ್ನು ನಾವು ಜೀವದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಮಾರಿ ಶಮಿತಾ ನಾಯ್ಕ ಅವರ ಭರತನಾಟ್ಯ ಪುಷ್ಪಾಂಜಲಿ ನೃತ್ಯ ವಿಶೇಷವಾಗಿತ್ತು. ಟಿಬೆಟಿಯನ್ನರ ಹಾಗೂ ಸಂಭೋತಾ ಟಿಬೆಟನ್ ಸ್ಕೂಲ್‌ನ ಹಿರಿಯ-ಕಿರಿಯ ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ ನಡೆಯಿತು. ಟಿಬೆಟಿಯನ್ ಯುವಕ ದುಂದುಪ್ ಅವರು ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಕನ್ನಡ ಚಿತ್ರಗೀತೆಯನ್ನು ಹಾಡಿ ಎಲ್ಲರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಮುಂಡಗೋಡ ಟಿಬೆಟಿಯನ್ ಕಾಲನಿಯ ದಲೈಲಾಮಾ ಪ್ರತಿನಿಧಿ ಜಿಗ್ಮೆ, ಸೆಕ್ರೆಟರಿ ಚಿಸಾ, ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ, 9 ಬೌದ್ಧಮಠದ ಪೀಠಾಧಿಕಾರಿಗಳು, ಹಿರಿಯ ಬೌದ್ಧ ಸನ್ಯಾಸಿಗಳು, ಎಲ್ಲಾ 10 ಕ್ಯಾಂಪಿನ ಮುಖಂಡರು ಇದ್ದರು.