ಶಿವಮೊಗ್ಗ: ಪ್ರತ್ಯೇಕ ಜೂಜಾಟ ಪ್ರಕರಣ; 68 ಮಂದಿ ಬಂಧನ

Update: 2018-07-06 18:05 GMT

ಶಿವಮೊಗ್ಗ,ಜು.6: ಮಟ್ಕಾ ಜುಗಾರಿಗಳ ಮೇಲೆ ಪೊಲೀಸರ ರೈಡ್ ಮುಂದುವರಿದಿದ್ದು, ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಮತ್ತೆ 68 ಜನರನ್ನು ಬಂಧಿಸಿ, 58 ಪ್ರಕರಣಗಳನ್ನು ದಾಖಲಿಸಿದ್ದಾರೆ. ಒಟ್ಟಾರೆ 65,305 ರೂ.ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಒಟ್ಟಾರೆ ಇಲ್ಲಿಯವರೆಗೂ 110 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 98 ಕೇಸ್‌ಗಳು ದಾಖಲಾದಂತಾಗಿದೆ. ಮಟ್ಕಾ, ಜೂಜಾಟದ ವಿರುದ್ಧ ಪೊಲೀಸರು ಸಮರ ಸಾರಿರುವುದು, ಜುಗಾರಿಗಳ ನಿದ್ದೆಗೆಡಿಸಿದೆ. ಬಂಧನ ಭೀತಿಯ ಹಿನ್ನೆಲೆಯಲ್ಲಿ ಹಲವು ಜುಗಾರಿಗಳು ದಂಧೆ ನಿಲ್ಲಿಸಿ, ಜಿಲ್ಲೆ ತೊರೆಯುವಂತಾಗಿದೆ.

ವಿವರ: ಎರಡನೇ ಹಂತದ ದಾಳಿಯಲ್ಲಿ ಜಿಲ್ಲಾ ವಿಶೇಷ ಪತ್ತೆ ದಳ ಪೊಲೀಸರು 10 ಕೇಸ್ ದಾಖಲಿಸಿ 13 ಜನರನ್ನು ಬಂಧಿಸಿದೆ. ಕೋಟೆ ಠಾಣೆ ಪೊಲೀಸರು 6 ಆರೋಪಿಗಳನ್ನು, ವಿನೋಬನಗರ ಠಾಣೆ 5, ದೊಡ್ಡಪೇಟೆ 4, ತುಂಗಾನಗರ ಠಾಣೆ 6, ಕುಂಸಿ ಠಾಣೆ 3, ಜಯನಗರ ಠಾಣೆ 2, ಶಿವಮೊಗ್ಗ ಗ್ರಾಮಾಂತರ ಠಾಣೆ 3, ಶಿಕಾರಿಪುರ ಗ್ರಾಮಾಂತರ ಠಾಣೆ 1, ಭದ್ರಾವತಿಯ ಹೊಳೆಹೊನ್ನೂರು ಠಾಣೆ 2, ಸಾಗರ ಪೇಟೆ ಠಾಣೆ 5, ಭದ್ರಾವತಿ ಗ್ರಾಮಾಂತರ ಠಾಣೆ 3, ಹಳೇನಗರ ಠಾಣೆ 3, ಹೊಸಮನೆ ಠಾಣೆ 4, ನ್ಯೂಟೌನ್ ಠಾಣೆ 1, ತೀರ್ಥಹಳ್ಳಿ ಠಾಣೆ 1, ಸಾಗರ ಗ್ರಾಮಾಂತರ ಠಾಣೆ 2, ಶಿಕಾರಿಪುರ ಪೇಟೆ ಠಾಣೆ 3 ಹಾಗೂ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಠಾಣೆ ಪೊಲೀಸು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಮುಂದುವರಿಕೆ: ಮಟ್ಕಾ ಸೇರಿದಂತೆ ಜೂಜು ಅಡ್ಡೆಗಳ ಮೇಲೆ ನಡೆಸುತ್ತಿರುವ ದಿಢೀರ್ ದಾಳಿಯನ್ನು ನಿರಂತರವಾಗಿ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ. ‘ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯು ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ. ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಮಟಕಾ, ಜೂಜಾಟ ನಡೆಯುತ್ತಿರುವ ಕುರಿತಂತೆ ಮಾಹಿತಿಯಿದ್ದರೆ ಸಮೀಪದ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂ ಸಂಖ್ಯೆ: 100 ಅಥವಾ ಸ್ಥಿರ ದೂರವಾಣಿ ಸಂಖ್ಯೆ : 08182-261413ಗೆ ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು’ ಎಂದು ಪೊಲಿೀಸ್ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News