ಪೆರುಂಬಾಡಿ-ಮಾಕುಟ್ಟ ರಸ್ತೆ: ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಕೊಡಗು ಜಿಲ್ಲಾಡಳಿತ

Update: 2018-07-06 18:12 GMT

ಮಡಿಕೇರಿ ಜು.6: ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ತಾತ್ಕಾಲಿಕ ಕಾಮಗಾರಿಗಳು, ರಕ್ಷಣಾ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡು ಪ್ರಸ್ತುತ ಲಘು ವಾಹನಗಳ ಸಂಚಾರಕ್ಕೆ ಯೋಗ್ಯವಾದ ರೀತಿಯಲ್ಲಿ ಪೂರ್ಣಗೊಳಿಸಲಾಗಿದೆ. ರಸ್ತೆಯಲ್ಲಿ ಜುಲೈ  7 ರಿಂದ ಅನ್ವಯಿಸುವಂತೆ ದ್ವಿಚಕ್ರ, ತ್ರಿ-ಚಕ್ರ ಮತ್ತು ನಾಲ್ಕು ಚಕ್ರದ ಲಘು ವಾಹನಗಳು ಮಾತ್ರ ಸಂಚರಿಸುವುದು. ಲಘು ವಾಹನಗಳು ಅರಣ್ಯ ಭಾಗದ 23 ಕಿ.ಮೀ. ರಸ್ತೆಯಲ್ಲಿ ಗರಿಷ್ಟ ಗಂಟೆಗೆ 30 ಕಿ.ಮೀ. ವೇಗ ಮೀರದಂತೆ ಹಾಗೂ ನಿಗಧಿತ ಅವಧಿಯಲ್ಲಿ ಈ ಪ್ರದೇಶವನ್ನು ಹಾದು ಹೋಗುವಂತೆ ಸಂಚರಿಸಲು ಕೊಡಗು ಜಿಲ್ಲಾಧಿಕಾರಿಗಳಾದ ಪಿ.ಐ.ಶ್ರೀವಿದ್ಯಾ ಅವರು ಅವಕಾಶ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಜೂನ್ ಎರಡನೇ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ವಿರಾಜಪೇಟೆ ತಾಲೂಕಿನ  ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿರುವ ಪೆರಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆ ಹಾಗೂ ಸೇತುವೆಗಳು ಮಣ್ಣು ಕುಸಿದು, ಮರಗಳು ಬಿದ್ದು ಹದಗೆಟ್ಟಿತ್ತು. ಕೇರಳ ರಾಜ್ಯ ಹೆದ್ದಾರಿಯ ಮಾರ್ಗದ ಮಧ್ಯೆ ಇರುವ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆ ಬದಿಯಲ್ಲಿ ಮಳೆ-ಗಾಳಿಗೆ ಬಿದ್ದ ಮರಗಳು ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ಅರಣ್ಯ ಇಲಾಖೆ ಮುಖಾಂತರ ಕಡಿದು ಈ ಸ್ಥಳದಿಂದ ತೆರವುಗೊಳಿಸಲಾಗಿದೆ. 

ಪ್ರಸ್ತುತ, ಪೆರಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಉಂಟಾಗಿದ್ದ ಭೂಕುಸಿತ ಮತ್ತು ಬಿದ್ದ/ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳನ್ನು ತೆರವುಗೊಳಿಸಿರುವುದರಿಂದ ಮತ್ತು ಹಾನಿಗೀಡಾಗಿದ್ದ ರಸ್ತೆಯಲ್ಲಿ ತಾತ್ಕಾಲಿಕ ರಕ್ಷಣಾ ಕ್ರಮಗಳನ್ನು ಕೈಗೊಂಡಿರುವುದರಿಂದ ಜೂನ್ 13 ರಂದು ಹೊರಡಿಸಲಾಗಿದ್ದ ಆದೇಶವನ್ನು ಭಾಗಶಃ ಮಾರ್ಪಡಿಸಿ, ಸಾರ್ವಜನಿಕರ ಮತ್ತು ಪ್ರಯಾಣಿಕರ ಸಂಚಾರದ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ಎಲ್ಲಾ ತರದ ವಾಹನಗಳ ಸಂಚಾರ ನಿಷೇಧಿಸಿರುವ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ಅರಣ್ಯ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಿ, ಈ ಷರತ್ತುಗಳಿಗೆ ಒಳಪಟ್ಟು ಕಡ್ಡಾಯವಾಗಿ ಪಾಲಿಸುವ ನಿಬಂಧನೆಗೆ ಒಳಪಡಿಸಿ, ಮುಂದಿನ ಆದೇಶದವರೆಗೆ ಪ್ರಯಾಣಿಕರ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.   

ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಈ ವಾಹನಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ವಾಹನಗಳು ಬದಲಿ ರಸ್ತೆಯಾದ ಗೋಣಿಕೊಪ್ಪ-ಪೊನ್ನಂಪೇಟೆ-ಶ್ರೀಮಂಗಲ-ಕುಟ್ಟ ಮಾರ್ಗವಾಗಿ ಸಂಚರಿಸಬಹುದಾಗಿದೆ. ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕರ/ ವಾಹನ ಸವಾರರ ಸುರಕ್ಷತೆಯ ದೃಷ್ಠಿಯಿಂದ ಈ ಆದೇಶ ಕಡ್ಡಾಯವಾಗಿ ಪಾಲನೆಗಾಗಿ ಆರಕ್ಷಕ, ಅರಣ್ಯ, ಪ್ರಾದೇಶಿಕ ಸಾರಿಗೆ ಇಲಾಖೆಯ ಸಿಬ್ಬಂದಿಗಳನ್ನು ತನಿಖಾ ಠಾಣೆಗೆ ನಿಯೋಜಿಸಲು ಹಾಗೂ ಆರಕ್ಷಕ, ಅರಣ್ಯ, ಲೋಕೋಪಯೋಗಿ ಇಲಾಖೆಯ ಮೊಬೈಲ್ ಪ್ಯಾಟ್ರೋಲಿಂಗ್ ತಂಡಗಳು ಪ್ರತಿನಿತ್ಯ (24*7 ಮಾದರಿಯಲ್ಲಿ) ಪಹರೆ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಈ ಬಗ್ಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕೋರಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News