ಗದಗ: ವಿಕಲಚೇತನರ ವಾಹನಗಳಿಗೆ ತುಕ್ಕು; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ

Update: 2018-07-06 18:26 GMT

ಗದಗ, ಜು.6: ವಿಕಲಚೇತನರ ಅನುಕೂಲಕ್ಕಾಗಿ ಸರಕಾರ ಯಂತ್ರ ಚಾಲಿತ ವಾಹನ ವಿತರಿಸುವ ಯೋಜನೆ ಜಾರಿಗೆ ತಂದಿದೆ. ಆದರೆ ಗದಗದಲ್ಲಿ ವಿಕಲಚೇತನರಿಗೆ ಸೇರಬೇಕಿದ್ದ ವಾಹನ ತುಕ್ಕು ಹಿಡಿಯುತ್ತಿವೆ. ಆರು ತಿಂಗಳಿಂದ ವಿತರಣೆಗೆ ವಾಹನಗಳ ಜೊತೆಗೆ ಫಲಾನುಭವಿಗಳು ಸಹ ಕಾಯುವಂತಾಗಿದೆ. ವಿಕಲಚೇತನರ ಕಲ್ಯಾಣಕ್ಕೆ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಿಸುವುದು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷದಿಂದ ವಿಕಲಚೇತನರ ಪಾಲಾಗಬೇಕಿದ್ದ ತ್ರಿಚಕ್ರ ವಾಹನಗಳು ತುಕ್ಕು ಹಿಡಿಯುತ್ತಿವೆ.

ಹೌದು. ಗದಗ ನಗರದ ಸಾಹಿತ್ಯ ಭವನದ ಬಯಲು ಜಾಗೆಯಲ್ಲಿ ವಿಕಲಚೇತನ ಇಲಾಖೆಯಿಂದ ವಿತರಿಸಬೇಕಿದ್ದ ಯಂತ್ರ ಚಾಲಿತ ವಾಹನಗಳನ್ನು ಬಯಲಲ್ಲೇ ನಿಲ್ಲಿಸಬೇಕಾಗಿದೆ. 2017-18 ನೇ ಸಾಲಿಗೆ 138 ತ್ರಿಚಕ್ರ ವಾಹನಗಳು ಮಂಜೂರಾಗಿವೆ. ಇದರಲ್ಲಿ ಸದ್ಯ ಇಲಾಖೆಗೆ 60 ವಾಹನಗಳು ಬಂದಿವೆ. ಜನವರಿ ತಿಂಗಳಲ್ಲೇ ವಾಹನಗಳು ಬಂದಿದ್ದರೂ ಈತನಕ ವಿತರಣೆಯಾಗಿಲ್ಲ. ವಾಹನ ನೋಂದಣಿ ಮಾಡಿಸುವಷ್ಟರಲ್ಲಿ ಚುನಾವಣೆ ನೀತೆ ಸಂಹಿತೆ ಜಾರಿಯಾಯಿತು. ಆದ್ದರಿಂದ ಫಲಾನುಭವಿಗಳಿಗೆ ವಾಹನ ವಿತರಿಸಲು ನೀತಿ ಸಂಹಿತೆ ಅಡ್ಡಿಯಾಯಿತು. ಇದೀಗ ಚುನಾವಣೆ ಪ್ರಕ್ರಿಯೆ ಮುಗಿದು, ಸರಕಾರ ರಚನೆಯಾದರೂ ವಾಹನ ವಿತರಣೆಗೆ ಮುಹೂರ್ತ ಕೂಡಿ ಬರದಿರುವುದು ವಿಪರ್ಯಾಸವೇ ಸರಿ.

ಸದ್ಯ 60 ವಾಹನಗಳ ಪೈಕಿ ನರಗುಂದ ಕ್ಷೇತ್ರಕ್ಕೆ ಮಂಜೂರಾದ 18 ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ. ಉಳಿದ 42 ವಾಹನಗಳು ಸಾಹಿತ್ಯ ಭವನದ ಅಂಗಳದಲ್ಲೇ ತುಕ್ಕು ಹಿಡಿದು ಬೀಳುವಂತಾಗಿದೆ. ಉಳಿದ ಶಿರಹಟ್ಟಿ, ಗದಗ, ರೋಣ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ವಾಹನ ವಿತರಣೆಯಾಗಿಲ್ಲ. ಇದರಿಂದ ವಾಹನ ನಂಬಿ ಕುಳಿತ ಫಲಾನುಭವಿಗಳ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನು ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ತೋರಿ ತಮಗೆ ವಾಹನ ವಿತರಿಸಲು ಆಸಕ್ತಿ ತೋರಬೇಕಿತ್ತು. ಇಲ್ಲವೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾದರೂ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಸಿ ವಾಹನ ವಿತರಿಸುವಲ್ಲಿ ಆಸಕ್ತಿ ತೋರಬೇಕಿತ್ತು.

ಆದರೆ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ವಿಕಲಚೇತನ ಫಲಾನುಭವಿಗಳ ಪಾಲಾಗಬೇಕಿದ್ದ ಯಂತ್ರಚಾಲಿತ ವಾಹನಗಳು ತುಕ್ಕು ಹಿಡಿಯುವಂತಾಗಿದೆ. ಏನೇ ಆಗಲಿ ಸರಕಾರದ ಯೋಜನೆ ಫಲಾನುಭವಿಗಳಿಗೆ ತಲುಪಿಸಲು ಶಾಸಕರು ಹಾಗೂ ಅಧಿಕಾರಿಗಳೇಕೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಮನೆಮಾಡಿದೆ. ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎನ್ನುವ ಸ್ಥಿತಿ ನಿರ್ಮಾಣವಾದಂತಾಗಿದೆ. ಆದಷ್ಟು ಬೇಗ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುವಂತಾಗಲಿ.

ಸ್ಥಳೀಯ ಶಾಸಕರು ದಿನಾಂಕ ನೀಡದಿರುವ ಕಾರಣ ವಾಹನ ವಿತರಣೆಯಲ್ಲಿ ವಿಳಂಬವಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ನರಗುಂದ ಶಾಸಕರು ಮಾತ್ರ ತ್ರಿಚಕ್ರ ವಾಹನ ವಿತರಿಸಿದ್ದು ಉಳಿದ ಮೂವರು ಶಾಸಕರು ವಿತರಣೆಗೆ ದಿನಾಂಕ ನೀಡಿರಲಿಲ್ಲ. ಅಷ್ಟರಲ್ಲೇ ಚುನಾವಣೆ ನೀತಿ ಸಂಹಿತೆ ಕೂಡ ಜಾರಿಯಾಯಿತು. ಹಾಗಾಗಿ ವಾಹನ ವಿತರಣೆಯಲ್ಲಿ ವಿಳಂಬವಾಗಿದೆ.
-ಆಶಾ ನದಾಫ್, ಜಿಲ್ಲಾ ವಿಕಲಚೇತನರ ಅಧಿಕಾರಿ.

ಇದೀಗ ನೀತಿ ಸಂಹಿತೆ ಮುಗಿದು ಸರಕಾರ ರಚನೆಯಾದರೂ ಶಾಸಕರು ಈ ಬಗ್ಗೆ ನಿರ್ಲಕ್ಷ ತೋರಿದ್ದಾರೆ. ಅಧಿಕಾರಿಗಳಿಗೂ ಈ ವಾಹನಗಳನ್ನು ಕಾಯುವುದೇ ಕಷ್ಟದ ಕೆಲಸವಾಗಿದೆ. ಇಂದು, ನಾಳೆ ಎಂದು ನಾವು ಬಕಪಕ್ಷಿಯಂತೆ ಕಾಯ್ದು ಕಾಯ್ದು ಸುಸ್ತಾಗಿದ್ದೇವೆ.
-ನಾಗರಾಜ, ಫಲಾನುಭವಿ

Writer - ವರದಿ: ಫಾರೂಕ್

contributor

Editor - ವರದಿ: ಫಾರೂಕ್

contributor

Similar News