ಎನ್‌ಡಿಎ ತೊರೆದು ‘ಮಹಾ ಮೈತ್ರಿ’ ಸೇರಲಿದೆಯೇ ಪಾಸ್ವಾನ್ ರ ಎಲ್‌ಜೆಪಿ?

Update: 2018-07-07 15:25 GMT

ಪಾಟ್ನಾ,ಜು.7: ಲೋಕ ಜನಶಕ್ತಿ ಪಾರ್ಟಿ(ಎಲ್‌ಜೆಪಿ)ಯು ಎನ್‌ಡಿಎ ತೊರೆದು ಆರ್‌ಜೆಡಿ ನೇತೃತ್ವದ ’ಮಹಾ ಮೈತ್ರಿಕೂಟ’ವನ್ನು ಸೇರಲಿದೆ ಎಂದು ಶುಕ್ರವಾರ ಹೇಳುವ ಮೂಲಕ ಆರ್‌ಜೆಡಿ ನಾಯಕ ರಘುವಂಶ ಪ್ರಸಾದ ಸಿಂಗ್ ಅವರು ಬಿಹಾರದ ರಾಜಕೀಯ ವಲಯಗಳಲ್ಲಿ ಸಂಚಲನವನ್ನು ಮೂಡಿಸಿದ್ದಾರೆ. ಆದರೆ ಎಲ್‌ಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರು ಇದನ್ನು ತಳ್ಳಿಹಾಕಿದ್ದಾರೆ.

‘‘ಪಾಸ್ವಾನ್ ಅವರು ರಾಜಕೀಯದಲ್ಲಿ ಹವಾಮಾನ ವಿಜ್ಞಾನಿ ಎಂದೇ ಖ್ಯಾತರಾಗಿದ್ದಾರೆ. ಎನ್‌ಡಿಎಯಲ್ಲಿನ ಸ್ಥಿತಿಯನ್ನು ಅವರು ಈಗಾಗಲೇ ಲೆಕ್ಕ ಹಾಕಿದ್ದಾರೆ ಮತ್ತು ನಮ್ಮ ಮೈತ್ರಿಕೂಟಕ್ಕೆ ಸೇರಲು ಸಜ್ಜಾಗಿದ್ದಾರೆ ’’ಎಂದು ಆರ್‌ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗು ಮಾಜಿ ಕೇಂದ್ರ ಸಚಿವ ಸಿಂಗ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ಬಿಹಾರದ ಪ್ರಗತಿಗಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ಕೆಲಸ ಮಾಡಲು ತಾನು ಸಿದ್ಧ ಎಂದು ಪಾಸ್ವಾನ್ ಪುತ್ರ ಹಾಗೂ ಎಲ್‌ಜೆಪಿ ಸಂಸದ ಚಿರಾಗ್ ಪಾಸ್ವಾನ್ ಅವರು ಇತ್ತೀಚಿಗೆ ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದ ಹಿನ್ನೆಲೆಯಲ್ಲಿ ಸಿಂಗ್ ಅವರ ಈ ಹೇಳಿಕೆ ಸಂಚಲನವನ್ನು ಸೃಷ್ಟಿಸಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಸ್ಥಾನಹಂಚಿಕೆ ಕುರಿತು ಪಾಸ್ವಾನ್ ಬಿಜೆಪಿಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಮತ್ತು ಅವರು ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೊತೆಯಾಗಿ ಎನ್‌ಡಿಎ ತೊರೆಯಲು ಯೋಜಿಸುತ್ತಿದ್ದಾರೆ ಎಂಬ ವರದಿಗಳಿಗೆ ಇದು ಇನ್ನಷ್ಟು ಪುಷ್ಟಿಯನ್ನು ನೀಡಿದೆ.

ಆದರೆ ಇದನ್ನು ಬಲವಾಗಿ ನಿರಾಕರಿಸಿರುವ ಪಾಸ್ವಾನ್,ಇದು ಕೇವಲ ಪೊಳ್ಳು ವದಂತಿಯಾಗಿದೆ. ಎಲ್‌ಜೆಪಿ ಎನ್‌ಡಿಎದ ಪ್ರಮುಖ ಅಂಗವಾಗಿದೆ. ಬಿಹಾರದಲ್ಲಿ ಎನ್‌ಡಿಎ ಪಾಲುದಾರ ಪಕ್ಷಗಳೊಂದಿಗೆ ಸ್ಥಾನಹಂಚಿಕೆಯಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂಬ ವಿಶ್ವಾಸ ತನಗಿದೆ ಎಂದು ಹೇಳಿದ್ದಾರೆ.

ಪಾಸ್ವಾನ್ ಅವರ ಅಳಿಯ ಹಾಗೂ ದಲಿತ ಸೇನಾ ಅಧ್ಯಕ್ಷ ಅನಿಲ್ ಕುಮಾರ್ ಅವರು ಕಳೆದ ಮಾರ್ಚ್‌ನಲ್ಲಿ ಆರ್‌ಜೆಡಿಗೆ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News